ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿನ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಸುದೀರ್ಘ ಪ್ರತಿಭಟನೆಯ ಸಂದರ್ಭದಲ್ಲಿ "ಶಾಹೀನ್ ಬಾಗ್‌ನ ದಾದಿ" ಎಂಬ ಹೆಸರು ಗಳಿಸಿದ್ದ 82 ವರ್ಷದ ಬಿಲ್ಕಿಸ್ ಬಾನೊ, ಟೈಮ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಜಾಗತಿಕ 100 ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ನಾನು ಈ ರೀತಿ ಗೌರವಿಸಲ್ಪಟ್ಟಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಇದನ್ನು ನಿರೀಕ್ಷಿಸಿರಲಿಲ್ಲ ಎಂದು ಮಾಧ್ಯಮಗಳೊಂದಿಗೆ ಮಾತನಾಡುತ್ತ ಹೇಳಿದ್ದಾರೆ.
ಬಿಲ್ಕಿಸ್ ಬಾನೊ ಜೊತೆಗೆ, ಪ್ರಧಾನಿ ನರೇಂದ್ರ ಮೋದಿ, ನಟ ಆಯುಷ್ಮಾನ್ ಖುರಾನಾ, ಜೀವಶಾಸ್ತ್ರಜ್ಞ ರವೀಂದ್ರ ಗುಪ್ತಾ ಮತ್ತು ಸುಂದರ್ ಪಿಚೈ ಅವರು '2020 ರ ಅತ್ಯಂತ ಪ್ರಭಾವಶಾಲಿ 100 ಜನರ' ಪಟ್ಟಿಯಲ್ಲಿದ್ದಾರೆ
‘ನಾನು ಕುರಾನ್ ಷರೀಫ್ ಮಾತ್ರ ಓದಿದ್ದೇನೆ, ನಾನು ಎಂದಿಗೂ ಶಾಲೆಗೆ ಹೋಗಿಲ್ಲ ಆದರೆ, ಇಂದು ಉತ್ಸುಕಳಾಗಿದ್ದೇನೆ ಮತ್ತು ಸಂತೋಷವಾಗಿದ್ದೇನೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇನೆ. ಅವರೂ ಕೂಡ ನನ್ನ ಮಗ, ನಾನು ಅವರಿಗೆ ಜನ್ಮ ನೀಡದಿದ್ದರೆ ಏನು, ನನ್ನ ಸಹೋದರಿ ಅವರಿಗೆ ಜನ್ಮ ನೀಡಿದ್ದಾರೆ. ಅವರ ಸಂತೋಷಕ್ಕಾಗಿ ಪ್ರಾರ್ಥಿಸುತ್ತೇನೆ’ ಎಂದು ಬಿಲ್ಕಿಸ್ ಬಾನೊ ಹೇಳಿದ್ದಾರೆ.
ಎನ್‌ಆರ್‌ಸಿ - ಸಿಎಎ ಪ್ರತಿಭಟನೆಯಲ್ಲಿ ಪ್ರಮುಖವಾಗಿ ಗುರ್ತಿಸಿಕೊಂಡ ಇತರ ಇಬ್ಬರು ಅಜ್ಜಿಯರೊಂದಿಗೆ ಬಿಲ್ಕಿಸ್ ಬಾನೊ ಕೂಡ ಇದ್ದರು. ಇವರು ಉತ್ತರ ಪ್ರದೇಶದ ಹಾಪುರ ಮೂಲದವರು. ಇವರ ಪತಿ ಸುಮಾರು ಹನ್ನೊಂದು ವರ್ಷಗಳ ಹಿಂದೆ ನಿಧನರಾಗಿದ್ದಾರೆ, ಬಿಲ್ಕಿಸ್ ಅವರು ಪ್ರಸ್ತುತ ಶಾಹೀನ್ ಬಾಗ್‌ನಲ್ಲಿ ತಮ್ಮ ಸೊಸೆ ಮತ್ತು ಮೊಮ್ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ.