ನವದೆಹಲಿ :ನಮ್ಮ ದೇಶದಲ್ಲಿನ ಜೀವ ವೈವಿಧ್ಯವು ಇಡೀ ಮಾನವಕುಲಕ್ಕೆ ಅಮೂಲ್ಯದ ನಿಧಿ. ನಾವು ಅದನ್ನು ಅನ್ವೇಷಿಸಿ ಸಂರಕ್ಷಿಸಬೇಕು ಎಂದು ಪ್ರಧಾನಿ ಮೋದಿ ತಮ್ಮ 62ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಮಕ್ಕಳು ಮತ್ತು ಯುವಕರಲ್ಲಿ ವೈಜ್ಞಾನಿಕ ಮನೋಭಾವವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಹೊಸ ವ್ಯವಸ್ಥೆ ಪರಿಚಯಿಸಲಾಗಿದೆ ಎಂದು ಮೋದಿ ತಿಳಿಸಿದ್ದಾರೆ. ಶ್ರೀಹರಿಕೋಟಾದಲ್ಲಿ 10,000 ಆಸನದ ಸಾಮರ್ಥ್ಯವುಳ್ಳ ಗ್ಯಾಲರಿ ನಿರ್ಮಾಣ ಮಾಡಲಾಗಿದೆ. ರಾಕೆಟ್ ಉಡಾವಣೆಗೆ ಜನರೂ ಕೂಡ ಸಾಕ್ಷಿಯಾಗಬಹುದು ಎಂದಿದ್ದಾರೆ.
ಇದೇ ವೇಳೆ ಕೇರಳದ ಮಹಿಳೆಯೊಬ್ಬರ ಕುರಿತು ಮಾತನಾಡಿದ ಮೋದಿ, ಕೊಲ್ಲಂನಲ್ಲಿ ಭಾಗೀರಥಿ ಅಮ್ಮ ಎಂಬುವರು 10 ವರ್ಷ ವಯಸ್ಸಿನವರಾಗಿದ್ದಾಗ ಶಾಲೆಯಿಂದ ವಂಚಿತರಾಗಿದ್ದರು. ಆದರೆ, ಛಲ ಬಿಡದ ಈಕೆ 105ನೇ ವಯಸ್ಸಿನಲ್ಲಿ ತಮ್ಮ ಅಧ್ಯಯನ ಪುನಾರಂಭಿಸಿದರು. ಶೇ.75 ಅಂಕಗಳೊಂದಿಗೆ 4ನೇ ತರಗತಿ ತೇರ್ಗಡೆಯಾಗಿದ್ದಾರೆ. ಇವರು ಸ್ಫೂರ್ತಿಯ ದೊಡ್ಡ ಮೂಲ. ಆಕೆಗೆ ನನ್ನ ಗೌರವ ಸಲ್ಲಿಸುತ್ತೇನೆ ಎಂದಿದ್ದಾರೆ.
ಇದೇ ವೇಳೆ ಉತ್ತರ ಪ್ರದೇಶದ ದಿವ್ಯಾಂಗ ಸಲ್ಮಾನ್ ಎಂಬುವರ ಬಗ್ಗೆ ಮಾತನಾಡಿದ ಮೋದಿ, ಸಲ್ಮಾನ್ ಹುಟ್ಟಿನಿಂದ ದಿವ್ಯಾಂಗ. ಮೊರಾದಾಬಾದ್‌ನ ಹಮೀರ್‌ಪುರ ಗ್ರಾಮದಲ್ಲಿ ಚಪ್ಪಲಿ ಮತ್ತು ಸೋಪು ತಯಾರಿಸುತ್ತಿದ್ದಾರೆ. ಅವರು 30 ದಿವ್ಯಾಂಗರಿಗೆ ತರಬೇತಿ ಮತ್ತು ಉದ್ಯೋಗ ನೀಡಿದ್ದಾರೆ. ಈ ವರ್ಷ ಇನ್ನೂ 100 ಜನರಿಗೆ ಉದ್ಯೋಗ ನೀಡಲು ಸಲ್ಮಾನ್ ನಿರ್ಧರಿಸಿದ್ದಾರೆ. ಅವರ ಧೈರ್ಯ ಮತ್ತು ಉದ್ಯಮಶೀಲತೆಗೆ ವಂದಿಸುತ್ತೇನೆ ಎಂದಿದ್ದಾರೆ.
ಮುಂದಿನ ತಿಂಗಳಲ್ಲಿ ಪರೀಕ್ಷೆಗಳನ್ನ ಎದುರಿಸಲಿರುವ ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಶುಭ ಕೋರಿದ್ದಾರೆ.