ನವದೆಹಲಿ:ಕೊರೊನಾ ರೋಗದ ವಿರುದ್ಧ ಜಾಗತಿಕ ಹೋರಾಟ ಮತ್ತು ಈ ಸಾಂಕ್ರಾಮಿಕವನ್ನು ಎದುರಿಸುವಲ್ಲಿ ವೈಜ್ಞಾನಿಕ ಆವಿಷ್ಕಾರ ಮತ್ತು ಸಂಶೋಧನೆಯಲ್ಲಿ ಜಾಗತಿಕ ಸಮನ್ವಯದ ಮಹತ್ವ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಚರ್ಚಿಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದ ಉಭಯ ನಾಯಕರು, ಕೊರೊನಾ ವಿರುದ್ಧದ ಹೋರಾಟದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ಸಹಕಾರದ ಬಗ್ಗೆ ಮಾತನಾಡಿದ್ದಾರೆ. ಕೋವಿಡ್-19 ಕುರಿತಂತೆ ಜಾಗತಿಕ ಚರ್ಚೆಗಳನ್ನು ಸಂಘಟಿಸುವುದು ಮುಖ್ಯವಾಗಿದೆ ಎಂಬುದನ್ನು ಇಬ್ಬರು ನಾಯಕರು ಒಪ್ಪಿಕೊಂಡಿದ್ದಾರೆ.
ಕೊರೊನಾ ಸಾಂಕ್ರಾಮಿಕ ವಿರುದ್ಧದ ಹೋರಾಟದಲ್ಲಿ ಭಾರತ ಕೈಗೊಂಡ ಪ್ರಜ್ಞಾಪೂರ್ವಕ ವಿಧಾನವನ್ನು ಮೋದಿ ಒತ್ತಿಹೇಳಿದ್ದಾರೆ. ಸಾರ್ವಜನಿಕರ ಕೇಂದ್ರಿತ ತಳ ಮಟ್ಟದ ವಿಧಾನಗಳಾದ ಸಾಮಾಜಿಕ ಅಂತರ, ಕೊರೊನಾ ವಾರಿಯರ್ಸ್ಗೆ ಗೌರವ, ಮಾಸ್ಕ್ಗಳನ್ನು ಧರಿಸುವುದು, ಸರಿಯಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಲಾಕ್‌ಡೌನ್ ನಿಬಂಧನೆಗಳನ್ನು ಅನುಸರಿಸುವುದರ ಕುರಿತು ಮೋದಿ ಅವರು ಬಿಲ್ ಗೆಟ್ಸ್ಗೆ ವಿವರಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, 'ಬಿಲ್ ಗೇಟ್ಸ್ ಅವರೊಂದಿಗೆ ಉತ್ತಮವಾದ ಚರ್ಚೆ ನಡೆಸಲಾಯಿತು. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತದ ಪ್ರಯತ್ನಗಳು, ಬಿಲ್ ಗೇಟ್ಸ್ ಫೌಂಡೇಶನ್‌ನ ಕೆಲಸ, ತಂತ್ರಜ್ಞಾನದ ಪಾತ್ರ, ಸಾಂಕ್ರಾಮಿಕ ರೋಗವನ್ನು ಗುಣಪಡಿಸಲು ಲಸಿಕೆ ತಯಾರಿಸುವುದು ಸೇರಿದಂತೆ ಮುಂತಾದ ವಿಷಯಗಳ ಬಗ್ಗೆ ನಾವು ಚರ್ಚಿಸಿದ್ದೇವೆ' ಎಂದಿದ್ದಾರೆ.