ಕೊರೊನಾ ನಂತರ ಮೊದಲ ಬಾರಿಗೆ ತವರು ರಾಜ್ಯಕ್ಕೆ ಪ್ರಧಾನಿ: ಹಲವು ಯೋಜನೆಗಳ ಉದ್ಘಾಟನೆ - ಗಾಂಧಿನಗರಕ್ಕೆ ಪ್ರಧಾನಿ ಮೋದಿ ಭೇಟಿ
ಕೊರೊನಾ ಮಹಾಮಾರಿಯ ನಂತರ ಮೊದಲ ಬಾರಿಗೆ ಪ್ರಧಾನಿ ಮೋದಿ ತಮ್ಮ ತವರು ರಾಜ್ಯ ಗುಜರಾತ್ಗೆ ಭೇಟಿ ನೀಡಿದ್ದು, ಮಾಜಿ ಸಿಎಂ ಕೇಶುಭಾಯ್ ಪಟೇಲ್ ಅವರಿಗೆ ಸಂತಾಪ ಸಲ್ಲಿಸಿದ ಬಳಿಕ ಹಲವು ಯೋಜನೆಗಳನ್ನು ಉದ್ಘಾಟಿಸಿದ್ದಾರೆ.
ಗುಜರಾತ್ನಲ್ಲಿ ಪ್ರಧಾನಿ ಮೋದಿ
ಗಾಂಧಿನಗರ (ಗುಜರಾತ್): ಪ್ರಧಾನಿ ಮೋದಿ ಎರಡು ದಿನಗಳ ಭೇಟಿಗಾಗಿ ಗುಜರಾತ್ಗೆ ಆಗಮಿಸಿದ್ದು, ಇತ್ತೀಚೆಗೆ ನಿಧನರಾದ ಮಾಜಿ ಮುಖ್ಯಮಂತ್ರಿ ಕೇಶುಭಾಯ್ ಪಟೇಲ್ ಅವರಿಗೆ ಗೌರವ ಸಮರ್ಪಣೆ ಮಾಡುವುದರ ಜೊತೆಗೆ ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
- ಕೊರೊನಾ ನಂತರ ಮೊದಲ ಬಾರಿಗೆ ತಮ್ಮ ತವರು ರಾಜ್ಯಕ್ಕೆ ಮೋದಿ ಬಂದಿದ್ದು, ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಂದ ಗುಜರಾತ್ ಸಿಎಂ ವಿಜಯ್ ರೂಪಾನಿ ಹಾಗೂ ರಾಜ್ಯಪಾಲ ಆಚಾರ್ಯ ದೇವವ್ರತ ಅವರು ಸ್ವಾಗತಿಸಿದರು.
- ಅಹಮದಾಬಾದ್ನಿಂದ ಗಾಂಧಿನಗರಕ್ಕೆ ಪ್ರಯಾಣ ಬೆಳೆಸಿದ ಅವರು ಗುರುವಾರ ನಿಧರಾಗಿದ್ದ ಗುಜರಾತ್ ಮಾಜಿ ಸಿಎಂ ಕೇಶುಭಾಯ್ ಪಟೇಲ್ ಅವರ ನಿವಾಸಕ್ಕೆ ತೆರಳಿ, ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
- ಕೇಶುಭಾಯ್ ಪಟೇಲ್ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಕೆವಾಡಿಯಾಗೆ ಭೇಟಿ ನೀಡಿದ ಮೋದಿ ಅವರು, ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆ ಬಳಿಯಿರುವ ಹೊಸದಾಗಿ ನಿರ್ಮಾಣವಾಗಿರುವ ಪ್ರವಾಸಿ ಸ್ಥಳವಾದ 'ಆರೋಗ್ಯ ವನ್' ಅನ್ನು ಉದ್ಘಾಟಿಸಿದರು. ಸುಮಾರು 17 ಎಕರೆ ಇರುವ ಈ ಪ್ರವಾಸಿ ಸ್ಥಳ 380 ಜಾತಿಯ ಐದು ಲಕ್ಷ ಮರಗಳನ್ನು ಹೊಂದಿದೆ. ಈ ಪ್ರವಾಸಿ ಸ್ಥಳದಲ್ಲಿ ಸ್ವಲ್ಪ ಹೊತ್ತು ಮೋದಿ ತಿರುಗಾಡಿದರು.
- ಆರೋಗ್ಯ ವನದಲ್ಲಿ ತಿರುಗಾಡಿದ ನಂತರ ಅಲ್ಲಿಯೇ ಇರುವ ಕೆಲವೊಂದು ಸ್ಥಳಗಳಿಗೆಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದರು. ಇದಾದ ನಂತರ ಹೊಸದಾಗಿ ಆರಂಭವಾಗಿರುವ ಚಿಲ್ಡ್ರನ್ ನ್ಯೂಟ್ರಿಷನ್ ಪಾರ್ಕ್ಗೆ ಚಾಲನೆ ನೀಡಿ, ನ್ಯೂಟ್ರಿಷನ್ ಟ್ರೇನ್ನಲ್ಲಿ ಸ್ವಲ್ಪ ಹೊತ್ತು ಓಡಾಡಿದರು.