ನವದೆಹಲಿ: ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಉಂಟಾದ ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದರು.
ಇನ್ನು ಈ ಸಭೆಯಲ್ಲಿ ಕರ್ನಾಟಕ, ಉತ್ತರ ಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ, ಪಂಜಾಬ್, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್ ಮತ್ತು ಬಿಹಾರ ಮುಖ್ಯಮಂತ್ರಿಗಳು ಉಪಸ್ಥಿತರಿದ್ದರು. ಇನ್ನು ಪ್ರಧಾನಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾಥ್ ನೀಡಿದರು. ಈ ವರ್ಷದ ಮಾರ್ಚ್‌ನಲ್ಲಿ ಮೊದಲ ಲಾಕ್‌ಡೌನ್ ಘೋಷಣೆಯಾದ ನಂತರ ಕೋವಿಡ್ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ಮುಖ್ಯಮಂತ್ರಿಗಳೊಂದಿಗೆ ಹಲವಾರು ಸಭೆಗಳನ್ನು ನಡೆಸಿದ್ದಾರೆ.
ನೈರುತ್ಯ ಮಾನ್ಸೂನ್ ಮತ್ತು ಪ್ರಸ್ತುತ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ರಾಜ್ಯಗಳಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಸೋಮವಾರ ನಡೆಸಿದ್ದ ಸಭೆಯಲ್ಲಿ ಪ್ರಧಾನಿ ಮಾಹಿತಿ ಕಲೆ ಹಾಕಿದ್ದರು. ಈ ಸಭೆಯಲ್ಲಿ ಅಸ್ಸೋಂ, ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ ಕೇರಳದ ಮುಖ್ಯಮಂತ್ರಿಗಳು ಭಾಗಿಯಾಗಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಕರ್ನಾಟಕ ಸಿಎಂ ಬದಲಿಗೆ ಸಚಿವರಾದ ಆರ್ ಅಶೋಕ್ ಹಾಗೂ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದರು.
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 53,601 ಹೊಸ ಕೊರೊನಾ ಪ್ರಕರಣಗಳು ಮತ್ತು 871 ಸಾವುಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಇನ್ನು ದೇಶದಲ್ಲಿ 6,39,929 ಸಕ್ರಿಯ ಪ್ರಕರಣಗಳಿದ್ದು, 15,83,490 ಮಂದಿ ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 45,257 ಏರಿಕೆಯಾಗಿದ್ದು, ದೇಶದಲ್ಲಿ ಒಟ್ಟು 22,68,676 ಕೊರೊನಾ ಪ್ರಕರಣ ದಾಖಲಾಗಿದೆ.