ಆಗ್ರಾ (ಯುಪಿ): ಅಪ್ಲಾಸ್ಟಿಕ್ ಅನೀಮಿಯಾ ಎಂಬ ಮಾರಕ ಖಾಯಿಲೆಯಿಂದ ಬಳಲುತ್ತಿರುವ ಉತ್ತರ ಪ್ರದೇಶದ ಬಾಲಕಿಗೆ ಪ್ರಧಾನಿ ನರೇಂದ್ರ ಮೋದಿ ನೆರವಿನ ಹಸ್ತಚಾಚಿದ್ದಾರೆ.
ಆಗ್ರಾದ ಬಾಲಕಿ ಲಲಿತ್ ಎಂಬುವರು ಮಾರಕ ಖಾಯಿಲೆಯಿಂದ ಬಳಲುತ್ತಿದ್ದಾರೆ. ಬಾಲಕಿ ಚಿಕಿತ್ಸೆಗಾಗಿ ಕುಟುಂಬ ಇದ್ದ ಆಸ್ತಿಯನ್ನೆಲ್ಲ ಮಾರಾಟ ಮಾಡಿದೆ. ಆದರೂ ಖಾಯಿಲೆಯಿಂದ ಬಾಲಕಿ ಗುಣಮುಖಳಾಗಿಲ್ಲ.
ತನ್ನ ಮಗಳ ಚಿಕಿತ್ಸೆಗಾಗಿ ಸರ್ಕಾರ ಅಗತ್ಯ ನೆರವು ನೀಡಬೇಕೆಂದು ಆಕೆಯ ತಂದೆ ಮನವಿ ಮಾಡಿ ಪತ್ರ ಬರೆದಿದ್ದರು. ಇದಕ್ಕೆ ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ಸೂಕ್ತ ಸ್ಪಂದನೆ ದೊರೆತು, ಬಾಲಕಿಯ ಚಿಕಿತ್ಸೆಗಾಗಿ 30 ಲಕ್ಷ ರೂ.ಗಳನ್ನು ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೆರವಿನ ಹಸ್ತ ಬಾಲಕಿಯ ತಂದೆ ಸುಮೀರ್ ಸಿಂಗ್ ಹೇಳಿದಂತೆ, ಮಗಳ ಚಿಕಿತ್ಸೆಗಾಗಿ ನಾನು ಜಮೀನು ಮಾರಿದೆ. ಮನೆಯನ್ನು ಅಡಮಾನಕ್ಕಿಟ್ಟಿದ್ದೇನೆ. ಈಗಾಗಲೇ 7 ಲಕ್ಷ ರೂ.ಗಳನ್ನು ಚಿಕಿತ್ಸೆಗಾಗಿ ವ್ಯಯಿಸಿದ್ದೇನೆ. ಆದರೂ ಮಗಳು ಗುಣಮುಖಳಾಗಿಲ್ಲ. ಇದರಿಂದ ನಾವು ಸಾಯುವ ನಿರ್ಧಾರವನ್ನೂ ಮಾಡಿದ್ದೆವು ಎಂದು ನೋವು ತೋಡಿಕೊಂಡರು.
ಬಾಲಕಿಯ ಅಣ್ಣನ ಬೋನ್ ಮ್ಯಾರೋವನ್ನು ಆಕೆಗೆ ವರ್ಗಾವಣೆ ಮಾಡಿದರೆ ಬದುಕುಳಿಯುತ್ತಾಳೆ ಎಂದು ಜೈಪುರದ ವೈದ್ಯರು ಹೇಳಿದ್ದರು. ಇದಕ್ಕಾಗಿ 10 ಲಕ್ಷ ರೂ. ವೆಚ್ಚವಾಗುತ್ತೆ ಎಂದೂ ಹೇಳಿದ್ದರು.
ಕೊನೆಯ ಪ್ರಯತ್ನವಾಗಿ ಸಿಂಗ್, ಪ್ರಧಾನಿಗಳಿಗೆ ಸಹಾಯ ಕೋರಿ ಪತ್ರ ಬರೆದಿದ್ದರು. ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ 30 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಇದಕ್ಕಾಗಿ ಬಾಲಕಿ ಕುಟುಂಬ ಪ್ರಧಾನಿಗಳಿಗೆ ಕೃತಜ್ಞತೆ ಸಲ್ಲಿಸಿದೆ.