ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ಮೋದಿ ಅವರೊಂದಿಗೆ ಫೋಟೊ, ವಿಡಿಯೋ ಬಳಕೆ ಮಾಡಿಕೊಳ್ಳುತ್ತಿರುವುದು ವಿಶ್ವದ ಗಮನ ಸೆಳೆದಿದೆ.
ಸೆಪ್ಟಂಬರ್ 17ರಂದು ಇಸ್ರೇಲ್ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಹಾಲಿ ಪ್ರಧಾನಿ ನೆತನ್ಯಾಹು ಅವರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ತಮ್ಮ ಲಿಕುಡ್ ಪಕ್ಷದ ಪ್ರಚಾರಾಂದೋಲನದಲ್ಲಿ ಪ್ರಧಾನಿ ಮೋದಿ ಜತೆಗಿನ ಆತ್ಮೀಯತೆಯನ್ನೂ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಿದೇಶಿ ಚುನಾವಣೆಯ ಪ್ರಚಾರದಲ್ಲಿ ಭಾರತದ ಪ್ರಧಾನಿ ಚಿತ್ರ ಬಳಸಿಕೊಳ್ಳುತ್ತಿರುವುದು ಇದೇ ಮೊದಲು ಎಂಬ ಮಾತುಗಳು ಸಹ ಕೇಳಿಬರುತ್ತಿವೆ.
2017ರಲ್ಲಿ ಪ್ರಧಾನಿ ಮೋದಿ ಇಸ್ರೇಲ್ಗೆ ಭೇಟಿ ನೀಡಿದ್ದ ಸಂದರ್ಭದ ದೃಶ್ಯಗಳನ್ನು ಲಿಕುಡ್ ಪಕ್ಷದ ಪ್ರಚಾರದ ವಿಡಿಯೋದಲ್ಲಿ ಬಳಸಿಕೊಳ್ಳಲಾಗಿದೆ. ಅಲ್ಲದೆ, ಪಕ್ಷದ ಪ್ರಧಾನಿ ಕಚೇರಿ ಹೊರಗೆ, ಮೋದಿ ಹಾಗೂ ನೆತನ್ಯಾಹು ಅವರ ಬೃಹತ್ ಫೋಟೊಗಳನ್ನು ಹಾಕಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಫೋಟೊಗಳನ್ನೂ ಸಹ ಹಾಕಲಾಗಿದೆ.
ಆರಂಭದಿಂದಲೂ ಇಸ್ರೇಲ್ ಹಾಗೂ ಭಾರತದ ಬಾಂಧವ್ಯ ಉತ್ತಮವಾಗಿದ್ದು, ಮೋದಿ ಮತ್ತೊಂದು ಅವಧಿಗೆ ಪ್ರಧಾನಿಯಾದಾಗ ನೆತನ್ಯಾಹು ಅವರೇ ಮೊದಲು ಶುಭ ಕೋರಿದ್ದರು. ಸೆ. 9ರಂದು ನೆತನ್ಯಾಹು ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.