ನವದೆಹಲಿ: ಭಾರತೀಯ ರಾಜಕೀಯದಲ್ಲಿ ಪ್ರಧಾನಿ ನರೇಂದ್ರ ಮೋದಿ 20 ವರ್ಷಗಳನ್ನು ಪೂರೈಕೆ ಮಾಡಿದ್ದು, ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ನಮೋ ಅವರನ್ನ ಹಾಡಿ ಹೊಗಳಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ಹಾಗೂ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ 20 ವರ್ಷಗಳ ಕಾಲ ಯಶಸ್ವಿಯಾಗಿ ಪೂರೈಕೆ ಮಾಡಿದ್ದಾರೆ. ಇದೇ ವಿಚಾರವಾಗಿ ಮಾತನಾಡಿರುವ ಅಮಿತ್ ಶಾ, ನರೇಂದ್ರ ಮೋದಿ ಗುಜರಾತ್ ಸಿಎಂ ಆಗಿದ್ದ ಸಂದರ್ಭದಲ್ಲಿ ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿತ್ತು. ಅಂದಿನಿಂದಲೂ ಕೇಂದ್ರದಲ್ಲಿ ಏಕೈಕ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿರಲಿಲ್ಲ. ಆದರೆ ಇದೀಗ ಕೇಂದ್ರದಲ್ಲಿ ಏಕೈಕ ಪಕ್ಷ ಆಡಳಿತದ ಚುಕ್ಕಾಣಿ ಹಿಡಿದಿದೆ ಎಂದು ತಿಳಿಸಿದರು.
ಮೋದಿಗೆ ಅಭಿನಂದನೆ ಸಲ್ಲಿಸಿದ ಅಮಿತ್ ಶಾ 2001ರ ಅಕ್ಟೋಬರ್ 7ರಂದು ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದು, ಅಕ್ಟೋಬರ್ 7 ಭಾರತೀಯ ಇತಿಹಾಸದಲ್ಲಿ ಮಹತ್ವದ ದಿನ. ಆ ದಿನದಿಂದಲೂ ಅವರ ಸಾರ್ವಜನಿಕ ಜೀವನ ಆರಂಭಗೊಂಡಿದ್ದು, ದೇಶದ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದಿದ್ದಾರೆ.
ಇದಾದ ಬಳಿಕ 2002, 2007 ಹಾಗೂ 2012ರಲ್ಲಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದು, ಮೂರನೇ ಅವಧಿಯಲ್ಲಿ ಅವರು ಸಿಎಂ ಆಗಿದ್ದಾಗಲೇ 2014ರ ಲೋಕಸಭಾ ಚುನಾವಣೆಯ ಪ್ರಚಾರದ ನೇತೃತ್ವ ವಹಿಸಿಕೊಂಡಿದ್ದರು ಎಂಬುದನ್ನು ತಿಳಿಸಿದ್ದಾರೆ. 2014, 2019ರಲ್ಲಿ ಕೇಂದ್ರದಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ತರುವಲ್ಲಿ ನರೇಂದ್ರ ಮೋದಿ ಅವರು ಯಶಸ್ವಿಯಾಗಿದ್ದಾರೆ. ದೇಶದ ಜನರ ಶ್ರೇಯೋಭಿವೃದ್ಧಿಗಾಗಿ ಬಿಡುವಿಲ್ಲದೇ ಕೆಲಸ ನಿರ್ವಹಿಸುತ್ತಿರುವ ನಮೋಗೆ ಅಭಿನಂದನೆ ಸಲ್ಲಿಕೆ ಮಾಡಿರುವ ಅಮಿತ್ ಶಾ ದೇಶಕ್ಕಾಗಿ ಅವರ ಸೇವೆ ಮುಂದುವರೆಯಲಿ ಎಂದು ಆಶಿಸಿದ್ದಾರೆ.