ನವದೆಹಲಿ:ಇಂಥ ಪೈಶಾಚಿಕ ಕೃತ್ಯಗಳಿಗೆ ನಮ್ಮಲ್ಲಿ ಜಾಗವಿಲ್ಲ ಎನ್ನುವ ಮೂಲಕ ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ನಡೆದ ಭೀಕರ ಸರಣಿ ಬಾಂಬ್ ಸ್ಫೋಟ ಪ್ರಕರಣವನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದರು. ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಭಾರತ ನಿಮ್ಮ ಜೊತೆ ನಿಲ್ಲಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಪೈಶಾಚಿಕ ಕೃತ್ಯಗಳಿಗೆ ನಮ್ಮಲ್ಲಿ ಜಾಗವಿಲ್ಲ,ಲಂಕಾ ಜೊತೆ ನಾವಿದ್ದೇವೆ- ಪ್ರಧಾನಿ ಮೋದಿ - ಕೊಲಂಬೋ
ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ನಡೆದ ಸರಣಿ ಸ್ಫೋಟದಲ್ಲಿ 187 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 400 ಮಂದಿ ಗಾಯಗೊಂಡಿದ್ದಾರೆ. 50 ಕ್ಕೂ ಹೆಚ್ಚು ವಿದೇಶೀಯರು ಘಟನೆಯಲ್ಲಿ ಮೃತಪಟ್ಟಿರುವ ಬಗ್ಗೆ ಶ್ರೀಲಂಕಾ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ದಾಳಿ ಖಂಡಿಸಿದ ಮೋದಿ
ಕೊಲಂಬೋದಲ್ಲಿರುವ ಪಂಚತಾರಾ ಹೊಟೇಲ್‌ಗಳು ಮತ್ತು ಚರ್ಚುಗಳೂ ಸೇರಿದಂತೆ ಒಟ್ಟು 8 ಕಡೆ ಈ ಸ್ಪೋಟ ಸಂಭವಿಸಿದೆ. ಈಸ್ಟರ್ ಭಾನುವಾರವಾದ್ದರಿಂದ ಕ್ರಿಶ್ಚಿಯನ್ನರು ಚರ್ಚುಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಘಟನೆ ಸಂಭವಿಸಿದೆ ಎಂದು ಕೊಲಂಬೋ ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಅಸುನೀಗಿದವರಲ್ಲಿ ಶ್ರೀಲಂಕಾ ಒಳಗೊಂಡಂತೆ ಅಮೆರಿಕ, ಬ್ರಿಟಿಷ್ ಹಾಗು ಡಚ್ ನಾಗರಿಕರು ಸೇರಿದ್ದಾರೆ ಎಂದು ಸುದ್ದಿ ಸಂಸ್ಥೆ AFP ವರದಿ ಮಾಡಿದೆ. ಆದರೆ, ಸ್ಫೋಟದಲ್ಲಿ ಭಾರತೀಯರು ಸಿಲುಕಿರುವ ಬಗ್ಗೆ ಸದ್ಯ ಮಾಹಿತಿ ಲಭ್ಯವಾಗಿಲ್ಲ.