ಚೆನ್ನೈ: ತಾಂತ್ರಿಕ ವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಆವಿಷ್ಕಾರಗಳೇ ಭಾರತದ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕನಸನ್ನ ಸಾಕಾರಗೊಳಿಸಲು ಸಾಧ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮದ್ರಾಸ್ ಐಐಟಿಯ 56ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತ ದೇಶವು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸುವ ಉದ್ದೇಶ ಹೊಂದಿದೆ. ನಿಮ್ಮ ಆವಿಷ್ಕಾರ ಮತ್ತು ತಂತ್ರಜ್ಞಾನಗಳೇ ಈ ಕನಸನ್ನ ಸಾಕರಗೊಳಿಸಲು ಸಾಧ್ಯ ಎಂದಿದ್ದಾರೆ.
ವಿದ್ಯಾರ್ಥಿಗಳನ್ನ ಕುರಿತು ಮಾತನಾಡಿದ ಮೋದಿ, ನನ್ನ ಮುಂದೆ ಮಿನಿ ಇಂಡಿಯಾ ಮತ್ತು ನವ ಭಾರತದ ಉತ್ಸಾಹ ಕಾಣುತ್ತಿದೆ. ನಿಮ್ಮ ಕಣ್ಣಿನಲ್ಲಿರುವ ಭವಿಷ್ಯದ ಕನಸು ನನಗೆ ಕಾಣುತ್ತಿದೆ. ನಿಮ್ಮ ಕಣ್ಣಿನಲ್ಲಿ ಭಾರತದ ಹಣೆ ಬರಹವಿದೆ ಎಂದಿದ್ದಾರೆ.
ಇನ್ನು ನೀವು ಎಲ್ಲೇ ಕೆಲಸ ಮಾಡಿ , ಎಲ್ಲೇ ಜೀವನ ಸಾಗಿಸಿ. ಆದರೆ, ನಿಮ್ಮ ಮಾತೃ ಭೂಮಿಯನ್ನ ಮಾತ್ರ ಮರೆಯಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ. ಅಲ್ಲದೆ, ನಿಮ್ಮ ವಿದ್ಯಾಭ್ಯಾಸಕ್ಕೆ ನೆರವಾದ ಶಿಕ್ಷಕರು ಮತ್ತು ಪೋಷಕರಿಗೆ ಎಲ್ಲಾ ವಿದ್ಯಾರ್ಥಿಗಳು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಧನ್ಯವಾದ ತಿಳಿಸಿ ಎಂದರು. ಈ ವೇಳೆ ಕಾರ್ಯಕ್ರಮದಲ್ಲಿ ನೆರೆದಿದ್ದ ಪ್ರತಿಯೊಬ್ಬರು ಎದ್ದು ನಿಂತು ಚಪ್ಪಾಳೆ ತಟ್ಟಿದರು.