ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನಲ್ಲಿ ತಮ್ಮ ಎನ್ಸಿಸಿ ದಿನಗಳನ್ನು ನೆನೆಪಿಸಿಕೊಂಡಿದ್ದಾರೆ.
59ನೇ ಆವೃತ್ತಿಯ ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಎನ್ಸಿಸಿ ಅನುಭವ ಹಾಗೂ ಅದರಲ್ಲಿ ನೀಡುತ್ತಿದ್ದ ಶಿಕ್ಷೆಯ ನೆನಪುಗಳನ್ನು ಬಿಚ್ಚಿಟ್ಟರು. ನಾನು ತುಂಬಾ ಶಿಸ್ತಿನಿಂದ ಎನ್ಸಿಸಿಯಲ್ಲಿ ಇದ್ದೆ. ಹೀಗಾಗಿ ನಾನು ಯಾವುದೇ ಶಿಕ್ಷೆಯನ್ನು ಅನುಭವಿಸಿಲ್ಲ ಎಂದರು.
ಒಂದು ಬಾರಿ ನಾನು ತಪ್ಪು ಮಾಡಿರುವೆನೆಂದು ಎಲ್ಲರೂ ತಪ್ಪು ತಿಳಿದುಕೊಂಡಿದ್ದರು. ಒಂದು ಬಾರಿ ಶಿಬಿರ ನಡೆಯುತ್ತಿದ್ದ ಸಂದರ್ಭದಲ್ಲಿ ನಾನು ಮರವೊಂದನ್ನು ಹತ್ತಿದ್ದೆ. ಮೊದಲಿಗೆ ಎಲ್ಲರೂ ಅದನ್ನು ಅಶಿಸ್ತು ಎಂದು ಅಂದುಕೊಂಡಿದ್ದರು. ಬಳಿಕ ಎಲ್ಲರಿಗೂ ಸತ್ಯ ತಿಳಿಯಿತು. ಮರದಲ್ಲಿ ಗಾಳಿಪಟದ ದಾರಕ್ಕೆ ಸಿಲುಕಿ ಒದ್ದಾಡುತ್ತಿದ್ದ ಹಕ್ಕಿಯನ್ನು ಬಿಡಿಸಲು ನಾನು ಮರವೇರಿದ್ದೆ. ಆ ಸಂದರ್ಭ ನನಗೆ ಪನಿಶ್ಮೆಂಟ್ ನೀಡುತ್ತಾರೆ ಎಂದುಕೊಂಡೆ. ಆದರೆ, ಎಲ್ಲರೂ ನನ್ನನ್ನು ಪ್ರಶಂಶಿಸಿದರು ಎಂದು ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿದರು.
ತಾವು ಭೇಟಿ ನೀಡಲು ಇಚ್ಛಿಸುವ ನೆಚ್ಚಿನ ಪ್ರವಾಸಿ ಸ್ಥಳದ ಬಗ್ಗೆ ತಿಳಿಸಿದ ಮೋದಿ, ನಾನು ಈಶಾನ್ಯ ಭಾರತಕ್ಕೆ ಮತ್ತೆ ಮತ್ತೆ ಹೋಗಲು ಇಚ್ಛಿಸುತ್ತೇನೆ. ಸಾಮಾನ್ಯವಾಗಿ ನನಗೆ ಹಿಮಾಲಯ ಪ್ರದೇಶ ತುಂಬಾ ಇಷ್ಟ. ಆದರೆ, ದಟ್ಟಾರಣ್ಯ, ಜಲಪಾತ ಹಾಗೂ ಎಲ್ಲವೂ ಇರುವ ಸುಂದರ ಪರಿಸರವನ್ನು ನೋಡಲು ನಾನು ಈಶಾನ್ಯ ಭಾರತಕ್ಕೆ ಹೋಗಲು ಇಷ್ಟಪಡುತ್ತೇನೆ ಎಂದು ಹೇಳಿದರು.
ತಮ್ಮ ಮಾತಿನಲ್ಲಿ ಸುಪ್ರೀಂ ತೀರ್ಪನ್ನು ಸ್ವೀಕರಿಸಿ, ಶಾಂತಿ ಮತ್ತು ತಾಳ್ಮೆಯಿಂದ ಇದ್ದ ಭಾರತೀಯರ ಪರಿಪಕ್ವತೆಯ ಮನಸ್ಥಿತಿಯನ್ನು ಶ್ಲಾಘಿಸಿದರು.ಇದರೊಂದಿಗೆ 'ಫಿಟ್ ಇಂಡಿಯಾ ವೀಕ್'ನಲ್ಲಿ ಪಾಲ್ಗೊಳ್ಳುವಂತೆ ಮೋದಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಲ್ಲಿ ಮನವಿ ಮಾಡಿಕೊಂಡರು.