ನವದೆಹಲಿ:ದೇಶದಲ್ಲಿ ಹೇರಲಾಗಿರುವ 21 ದಿನಗಳ ಲಾಕ್ಡೌನ್ ಏಪ್ರಿಲ್ 14ರಂದು ಮುಕ್ತಾಯಗೊಳ್ಳಲಿದ್ದು, ಇದೇ ವಿಷಯವಾಗಿ ನಾಳೆ ಎಲ್ಲ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ ಲಾಕ್ಡೌನ್ ಮುಂದುವರಿಯುವುದು ಬಹುತೇಕ ಖಚಿತವಾಗಿದ್ದು, ಜನಸಾಮಾನ್ಯರ ದೃಷ್ಠಿಯಿಂದ ಕೆಲವೊಂದು ಬದಲಾವಣೆ ಆಗುವ ಸಾಧ್ಯತೆಗಳಿವೆ.
ಶಾಲೆ, ಕಾಲೇಜ್ ಹಾಗೂ ಧಾರ್ಮಿಕ ಸಂಘ-ಸಂಸ್ಥೆಗಳು ಬಂದ್ ಆಗಲಿದ್ದು, ದೇವಸ್ಥಾನದ ಬಾಗಿಲು ಓಪನ್ ಆಗುವುದು ಕಷ್ಟ. ಆದರೆ ದೇಶದ ಆರ್ಥಿಕತೆ ಸಂಪೂರ್ಣವಾಗಿ ಹದಗೆಟ್ಟಿರುವ ಕಾರಣ ಕೆಲವೊಂದು ವಲಯಗಳು ಮತ್ತೆ ಕಾರ್ಯಾರಂಭ ಆಗುವ ಲಕ್ಷಣಗಳಿವೆ.
ದೇಶದ ಮೇಲೆ ಹೇರಲಾಗಿರುವ ಲಾಕ್ಡೌನ್ ಮುಂದುವರಿಸಬೇಕು ಎಂದು ಈಗಾಗಲೇ ಅನೇಕ ರಾಜ್ಯಗಳು ಪ್ರಧಾನಿ ಮೋದಿಗೆ ಸಲಹೆ ನೀಡಿದ್ದು, ಇದರ ಮಧ್ಯೆ ಎರಡು ದಿನಗಳ ಹಿಂದೆ ನಡೆದ ಸರ್ವಪಕ್ಷ ಸಭೆಯಲ್ಲೂ ವಿವಿಧ ಪಕ್ಷದ ಮುಖಂಡರು ಲಾಕ್ಡೌನ್ ಮುಂದುವರಿಸುವ ಸಲಹೆ ನೀಡಿದ್ದಾರೆ. ಹೀಗಾಗಿ ನಮೋ ಕೂಡ ಇದೇ ನಿರ್ಧಾರ ಹೊರಹಾಕುವ ಸಾಧ್ಯತೆ ಇದೆ.
ಕರ್ನಾಟಕ,ಉತ್ತರಪ್ರದೇಶ, ತೆಲಂಗಾಣ,ರಾಜಸ್ಥಾನ, ಆಸ್ಸೋಂ, ಮಧ್ಯಪ್ರದೇಶ ಹಾಗೂ ಚತ್ತಿಸಗಢದಲ್ಲಿ ಲಾಕ್ಡೌನ್ ಮುಂದುವರಿಯುವುದು ಬಹುತೇಕ ಖಚಿತವಾಗಿದೆ. ಆದರೆ ಈಗಾಗಲೇ ಓಡಿಶಾದಲ್ಲಿ ಏಪ್ರಿಲ್ 30ರವರೆಗೆ ಇದು ವಿಸ್ತರಣೆಯಾಗಿದೆ.