ನವದೆಹಲಿ:ನಾಳೆ ಎನ್ಡಿಎ ಸರ್ಕಾರ ಎರಡನೇ ಅವಧಿಯ ಚೊಚ್ಚಲ ಬಜೆಟ್ ಬಜೆಟ್ ಮಂಡಿಸಲು ಸಕಲ ರೀತಿಯಲ್ಲಿ ಸನ್ನದ್ಧವಾಗಿದೆ. ಈ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಸರ್ವಪಕ್ಷಗಳ ಸಭೆ ನಡೆಸಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ಚುನಾವಣೆ ಫಲಿತಾಂಶ ಹೊರಬಿದ್ದ ನಂತರ ಹಾಗೂ ಮುಂಗಾರು ಅಧಿವೇಶನ ನಡೆಯುವ ಒಂದು ದಿನ ಮುನ್ನ ಸರ್ವಪಕ್ಷಗಳ ಸಭೆ ನಡೆಸಲಾಗಿದೆ. ಅಮೂಲ್ಯವಾದ ಸಲಹೆ ನೀಡಿದ ಎಲ್ಲಾ ನಾಯಕರಿಗೆ ಧನ್ಯವಾದ. ಜನರ ಆಕಾಂಕ್ಷೆಗಳನ್ನು ಈಡೇರಿಸುವ ಉದ್ದೇಶದಿಂದ ಸಂಸತ್ ಸುಗಮವಾಗಿ ಸಾಗಲು ನಾವೆಲ್ಲ ಬದ್ಧರಾಗಿರಬೇಕು ಎಂದು ಕರೆ ನೀಡಿದ್ದಾರೆ.
ಸಭೆಯ ನಂತರ ಮಾತನಾಡಿದ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ, ಇಂದು ನಡೆದ ಸಭೆಯಲ್ಲಿ ಪ್ರತಿಪಕ್ಷಗಳು ಹಾಗೂ ಮೈತ್ರಿ ಪಕ್ಷಗಳು ಉತ್ತಮ ಸಲಹೆ ನೀಡಿದ್ದಾರೆ. ಸಂಸತ್ತಿನ ಹೊಸ ಸದಸ್ಯರಿಂದ ಹೊಸ ಚಿಂತನೆಗಳು ಹೊರಬರಬೇಕು ಎಂದು ಪ್ರಧಾನಿ ಸಲಹೆ ನೀಡಿದ್ದಾರೆ ಎಂದರು.
ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಜೂನ್ 19ರಂದು ಪ್ರಧಾನಿ ಮೋದಿ ಅವರು ಎಲ್ಲ ಪಕ್ಷಗಳ ಅಧ್ಯಕ್ಷರ ಸಭೆ ಕರೆದಿದ್ದಾರೆ. ಒಂದು ದೇಶ, ಒಂದು ಚುನಾವಣೆ ಹಾಗೂ ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನಾಚರಣೆ ಕುರಿತಾಗಿ ಚರ್ಚೆ ನಡೆಸಲಿದ್ದಾರೆ ಎಂದು ಸಚಿವ ಜೋಶಿ ತಿಳಿಸಿದರು.
ಲೋಕಸಭೆಯಲ್ಲಿ ಎನ್ಡಿಎ ಸರ್ಕಾರ 353 ಸಂಸದ ಸಂಖ್ಯಾಬಲ ಹೊಂದಿದೆ. ಆದರೆ ರಾಜ್ಯಸಭೆಯಲ್ಲಿ 102 ಸದಸ್ಯರು ಮಾತ್ರ ಇರುವುದರಿಂದ ಕಾನೂನುಗಳು ಅಂಗೀಕಾರವಾಗಲು ಎಲ್ಲ ಪಕ್ಷಗಳ ಸಹಕಾರ ಅಗತ್ಯವಿದೆ. ಎಲ್ಲರ ಸಹಕಾರ ಕೋರಲೆಂದೇ ಮೋದಿ ಇಂದು ಸಭೆ ನಡೆಸಿದರು.
ಕಳೆದ ಅವಧಿಯಲ್ಲಿ ಜಾರಿಮಾಡಲು ಹೊರಟಿದ್ದ ತ್ರಿವಳಿ ತಲಾಖ್ ಸೇರಿದಂತೆ ಹಲವು ವಿಧೇಯಕಗಳನ್ನು ಈ ಬಾರಿಯಾದರೂ ಅನುಷ್ಠಾನಕ್ಕೆ ತರಬೇಕಿದೆ. ಇನ್ನು, ಲೋಕಸಭೆಯಕಲ್ಲಿ 52 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲಿದೆ.
ಸಭೆಯಲ್ಲಿ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಪ್ರಹ್ಲಾದ್ ಜೋಶಿ ಪ್ರತಿಪಕ್ಷಗಳ ನಾಯಕರುಗಳಾದ ಗುಲಾಂ ನಬಿ ಆಜಾದ್, ಅಧೀರ್ ರಂಜನ್ ಚೌಧರಿ, ಸುದೀಪ್ ಬಂಡೋಪಾಧ್ಯಾಯ, ಡೆರೆಕ್ ಒ ಬ್ರೈನ್, ಫಾರೂಕ್ ಅಬ್ದುಲ್ಲಾ ಸೇರಿ ಹಲವರು ಪಾಲ್ಗೊಂಡಿದ್ದರು.