ನವದೆಹಲಿ:ಕೋವಿಡ್ -19 ಸೋಂಕು ಎಸೆದಿರುವ ಸವಾಲುಗಳನ್ನು ಎದುರಿಸಲು ಭಾರತ ಮತ್ತು ಇಂಡೋನೇಷ್ಯಾ ನಡುವಿನ ನಿಕಟ ಸಹಕಾರ ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೋ ಅವರಿಗೆ ತಿಳಿಸಿದ್ದಾರೆ.
ಜೋಕೊ ವಿಡೋಡೋ ಅವರೊಂದಿಗೆ ಚರ್ಚೆ ನಡೆಸಿದ ಮೋದಿ, ಈ ಬಿಕ್ಕಟ್ಟಿನ ಸಮಯದಲ್ಲಿ ಉಭಯ ದೇಶಗಳ ನಡುವೆ ವ್ಯಾಪಾರ ಮಾಡುವ ವೈದ್ಯಕೀಯ ಉತ್ಪನ್ನಗಳ ಮುಕ್ತ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಇದೇ ವೇಳೆ, ಉಭಯ ನಾಯಕರು ಪರಸ್ಪರ ದೇಶಗಳಲ್ಲಿರುವ ತಮ್ಮ ಪ್ರಜೆಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆಯೂ ಚರ್ಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಕೋವಿಡ್-19 ಸಾಂಕ್ರಾಮಿಕ ಕುರಿತಂತೆ ನಮ್ಮ ಉತ್ತಮ ಸ್ನೇಹಿತ, ಜೋಕೊ ವಿಡೋಡೋ ಅವರೊಂದಿಗೆ ಚರ್ಚಿಸಲಾಗಿದೆ. ಈ ಬಿಕ್ಕಟ್ಟಿನಿಂದ ಉಂಟಾಗುವ ಆರೋಗ್ಯ ಮತ್ತು ಆರ್ಥಿಕ ಸವಾಲುಗಳನ್ನು ಎದುರಿಸಲು ಭಾರತ ಮತ್ತು ಇಂಡೋನೇಷ್ಯಾ ನಡುವಿನ ನಿಕಟ ಸಹಕಾರ ಮುಖ್ಯವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಭಾರತದ ನೆರೆಹೊರೆಯಲ್ಲಿ ಇಂಡೋನೇಷ್ಯಾ ಒಂದು ಪ್ರಮುಖ ಕಡಲ ಪಾಲುದಾರ ಎಂಬ ಅಂಶವನ್ನು ಪ್ರಧಾನಿ ಒತ್ತಿ ಹೇಳಿದ್ದಾರೆ. ದ್ವಿಪಕ್ಷೀಯ ಸಂಬಂಧದ ಶಕ್ತಿ ಸಾಂಕ್ರಾಮಿಕ ಪರಿಣಾಮಗಳ ವಿರುದ್ಧ ಹೋರಾಡಲು ಎರಡೂ ದೇಶಗಳಿಗೆ ಸಹಾಯ ಮಾಡುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.