ಅನಂತಪುರ (ಆಂಧ್ರಪ್ರದೇಶ):ಎಸ್‌ಸಿ ಸಮುದಾಯಕ್ಕೆ ಸೇರಿದ ದಂಪತಿ ಕಂದಾಯ ವಿಭಾಗೀಯ ಅಧಿಕಾರಿಯ (ಆರ್‌ಡಿಒ) ಪಾದಗಳನ್ನು ಮುಟ್ಟಿ ಪ್ರಕರಣವೊಂದರಲ್ಲಿ ನ್ಯಾಯ ಕೊಡಿಸುವಂತೆ ಮನವಿ ಮಾಡಿದ ಘಟನೆ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ.
ಮೇ 15 ರಂದು ಕೊನುಪ್ಪಲಪಾಡು ಗ್ರಾಮದ ಮೇಲ್ಜಾತಿಯ ಕೆಲವರು, ಓಬಣ್ಣಾ ಮತ್ತು ರತ್ನಕುಮಾರಿ ಎಂಬ ದಂಪತಿ ಮೇಲೆ ಜಾತಿ ವಿಚಾರದಲ್ಲಿ ಗಲಾಟೆ ನಡೆಸಿದ್ದಾರೆ. ಇದು ಎರಡೂ ಕಡೆಯವರ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ.
ನಂತರ ದಂಪತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಮೇಲ್ಜಾತಿಯ ಜನರ ವಿರುದ್ಧ ಪ್ರಕರಣ ದಾಖಲಿಸಿದರು. ಈ ವೇಳೆ ಪೊಲೀಸರು ದಂಪತಿ ಎಸ್‌ಸಿ ಪ್ರಮಾಣಪತ್ರವನ್ನು ತಹಶೀಲ್ದಾರ್‌ಗೆ ಹಸ್ತಾಂತರಿಸಿದ್ದಾರೆ. ಆದರೆ, ರಾಜಕೀಯ ಒತ್ತಡದಿಂದಾಗಿ ಆಶ್ಚರ್ಯಕರವಾಗಿ ಎಸ್‌ಸಿ ಪ್ರಮಾಣಪತ್ರ, ಬಿಸಿ ಪ್ರಮಾಣಪತ್ರವಾಗಿ (ಹಿಂದುಳಿದ ವರ್ಗ) ಬದಲಾಗಿದೆ ಎಂದು ದಂಪತಿ ಆರೋಪಿಸಿದ್ದಾರೆ.
ಮೇ 31ರಂದು ಡಿಎಸ್ಪಿ ಶ್ರೀನಿವಾಸುಲು ಮತ್ತು ಆರ್‌ಡಿಒ ಗುಣಭೂಷಣ ರೆಡ್ಡಿ ಅವರು ಈ ಪ್ರಕರಣದ ತನಿಖೆಗಾಗಿ ಗ್ರಾಮಕ್ಕೆ ತೆರಳಿದ್ದಾಗ, ದಂಪತಿ ನ್ಯಾಯಕ್ಕಾಗಿ ಮನವಿ ಮಾಡಿ ಕಂದಾಯ ವಿಭಾಗೀಯ ಅಧಿಕಾರಿಯ ಕಾಲಿಗೆ ಬಿದ್ದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಗ್ರಾಮದ ಕಂದಾಯ ಅಧಿಕಾರಿಯನ್ನು ಅಮಾನತುಗೊಳಿಸಿ, ತಹಶೀಲ್ದಾರ್‌ಗೆ ಶೋಕಾಸ್ ನೋಟಿಸ್ ನೀಡಿದ್ದಾರೆ.