ನವದೆಹಲಿ:ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಅಥವಾ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದ ನ್ಯಾಯಾಂಗ ವಿಚಾರಣಾ ಆಯೋಗವು ಸ್ವತಂತ್ರ ತನಿಖೆ ನಡೆಸಬೇಕೆಂದು ಕೋರಿ ಇಬ್ಬರು ವಕೀಲರಿಂದ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.
ವಿಶಾಲ್ ಠಾಕ್ರೆ ಮತ್ತು ಅಭಯ್ ಸಿಂಗ್ ಯಾದವ್ ಎಂಬ ಇಬ್ಬರು ವಕೀಲರು ಸುಪ್ರೀಂಕೋರ್ಟ್ ಮುಂದೆ ಅರ್ಜಿ ಸಲ್ಲಿಸಿದ್ದಾರೆ. ಹಿಂಸಾಚಾರ ಸಂಬಂಧ ವರದಿಯನ್ನು ಸಮಯಕ್ಕೆ ಅನುಗುಣವಾಗಿ ಸಲ್ಲಿಸಲು ವಿಚಾರಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ.
ಈ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕು. ಕಾನೂನುಬಾಹಿರ ಮತ್ತು ಹಿಂಸಾತ್ಮಕ ಕೃತ್ಯಕ್ಕೆ ಹೊಣೆಗಾರರಾದವರಿಗೆ ಶಿಕ್ಷೆಯಾಗಬೇಕು. ರೈತರ ಮುಖವಾಡ ಧರಿಸಿದ ಕೆಲ ಗೂಂಡಾಗಳಿದ್ದು, ಅವರನ್ನು ಗುರುತಿಸಬೇಕಿತ್ತು. ಈ ಬಗ್ಗೆ ಪರಿಶೀಲನೆ ಅಗತ್ಯ. ಶಾಂತಿಯುತ ಪ್ರತಿಭಟನೆ ಮತ್ತು ಟ್ರ್ಯಾಕ್ಟರ್ ಪರೇಡ್ಗೆ ನೀಡಿದ್ದ ಅನುಮತಿಯುನ್ನು ರೈತರ ವೇಷದಲ್ಲಿದ್ದ ಕೆಲವು ಗೂಂಡಾಗಳು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ:ದೆಹಲಿ ಹಿಂಸಾಚಾರ: ಇದುವರೆಗೆ 84 ಜನರ ಬಂಧನ, 38 ಎಫ್‌ಐಆರ್ ದಾಖಲು
ಘಟನೆಯ ನಂತರ ಪ್ರಸಾರವಾದ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಮೊಬೈಲ್ ವಿಡಿಯೋಗಳ ಆಧಾರದ ಮೇಲೆ ಕಾನೂನಯ ಉಲ್ಲಂಘಿಸಿದವವರನ್ನು ಹುಡುಕಲು ಮತ್ತು ಶಿಕ್ಷೆ ವಿಧಿಸಲು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.