ಉಜ್ಜೈನ್: ಮಧ್ಯ ಪ್ರದೇಶದ ಉಜ್ಜೈನ್ನಲ್ಲಿ ಸಾಂಪ್ರದಾಯಿಕ ಮರದ ಬಾಚಣಿಗೆ ತಯಾರಕರನ್ನು ಹುಡುಕುವವರಿಗೆ ಇಂಡಿಗೊ-ಬಣ್ಣದ ಮನೆಯೇ ಒಂದು ಹೆಗ್ಗುರುತು. ಕುಶಲಕರ್ಮಿಗಳೇ ಹೆಚ್ಚಾಗಿದ್ದ ಈ ಪ್ರದೇಶದಲ್ಲೀಗ ಬಾಚಣಿಗೆ ತಯಾರಿಕಾ ವೃತ್ತಿಯನ್ನು ಉಳಿಸಿಕೊಂಡು ಬಂದಿರುವ ಕೆಲವೇ ಕೆಲವು ವ್ಯಕ್ತಿಗಳಲ್ಲಿ 80 ವರ್ಷದ ಚಗನ್ಲಾಲ್ ಕೂಡ ಒಬ್ಬರು.
80 ವರ್ಷ ದಾಟಿ, ಕೂದಲು ಹಣ್ಣಾಗಿರುವ ಚಗನ್ಲಾಲ್ರ ಕೈಗಳು ದುರ್ಬಲವಾಗಿದ್ದು, ಬೆರಳುಗಳು ಸುಕ್ಕುಗಟ್ಟಿವೆ. ಆದರೆ ಉತ್ತರ ಭಾರತದ ರೋಸ್ ವುಡ್ ಎಂದು ಕರೆಯುವ ಶೀಶಮ್ ಮರಗಳ ಮೇಲೆ ಇವರ ಬೆರಳುಗಳು ಈಗಲೂ ಚತುರವಾಗಿ, ವೇಗವಾಗಿ ಕೆಲಸ ಮಾಡುತ್ತವೆ.
ದಶಕಗಳಿಂದ ಮರದ ಬಾಚಣಿಗೆ ತಯಾರಿಸುತ್ತಾ ಬಂದ ಚಗನ್ಲಾಲ್... ಮರದ ಬಾಚಣಿಗೆಗಳು ಪ್ಲಾಸ್ಟಿಕ್ ಬಾಚಣಿಕೆಗಳಿಗಿಂತ ಶ್ರೇಷ್ಠ. ಇವು ಕೂದಲು ಉದುರುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟುವುದಲ್ಲವೇ ನೆತ್ತಿಗೆ ಮೃದುವಾದ ಮಸಾಜ್ ಕೂಡ ನೀಡುತ್ತದೆ. ಕಳೆದ 70 ವರ್ಷಗಳಿಂದಲೂ ನಾನು ಮರದ ಬಾಚಣಿಗೆಯನ್ನೇ ಬಳಸುತ್ತಿದ್ದು, ಅದರ ಫಲಿತಾಂಶ ನಿಮ್ಮ ಕಣ್ಣ ಮುಂದೆಯೇ ಇದೆ ನೋಡಿ ಎಂದು ಚಗನ್ಲಾಲ್, ತಮ್ಮ ಬಿಳಿ ಕೂದಲನ್ನು ತೋರಿಸುತ್ತಾ ಹೇಳುತ್ತಾರೆ.
ಹಕ್ಕಿಗಳಿಂದ ಹಿಡಿದು ಮೀನುಗಳ ತರಹದ ವಿನ್ಯಾಸಗಳಲ್ಲಿ ಚಗನ್ಲಾಲ್ ಮರದ ಬಾಚಣಿಗೆಗಳನ್ನು ತಯಾರಿಸುತ್ತಾರೆ. ಇವುಗಳ ಬೆಲೆ 50 ರಿಂದ 150 ರೂಪಾಯಿಗಳಾಗಿವೆ. ಇನ್ನು ಚಗನ್ಲಾಲ್ರ ಕರಕುಶಲತೆಗೆ ಸ್ವತಃ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್‌ರಂತಹ ಪ್ರಮುಖ ವ್ಯಕ್ತಿಗಳು ಶ್ಲಾಘಿಸಿದ್ದಾರೆ.
ಒಟ್ಟಾರೆಯಾಗಿ ಈ ಮರದ ಬಾಚಣಿಗೆಗಳು ಕೂದಲಿಗೆ, ನೆತ್ತಿಗೆ ಮಾತ್ರ ಉಪಯುಕ್ತವಲ್ಲ, ಪರಿಸರ ಸ್ನೇಹಿ ಬಾಚಣಿಗೆಯನ್ನು ಬಳಸಿ ಪ್ಲಾಸ್ಟಿಕ್ ನಿಷೇಧಿಸಿ ಎಂಬ ಸ್ಪಷ್ಟ ಸಂದೇಶವನ್ನೂ ಚಗನ್ಲಾಲ್ ನೀಡುತ್ತಾರೆ.