ನವದೆಹಲಿ: ಕೊರೊನಾ ಸೋಂಕಿತ ವ್ಯಕ್ತಿ ಮೇಲೆ ಪ್ಲಾಸ್ಮಾ ಥೆರಪಿ ಮಾಡಲಾಗಿದ್ದು, ಇದರಿಂದಾಗಿ ಆ ವ್ಯಕ್ತಿ ಶೀಘ್ರವಾಗಿ ಗುಣಮುಖನಾಗುತ್ತಿದ್ದಾನೆ ಎಂದು ಮಾಕ್ಸ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
49 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದ್ದು, ಆತನ ಮೇಲೆ ಪ್ಲಾಸ್ಮಾ ಥೆರಪಿ ಮೊದಲ ಬಾರಿಗೆ ಮಾಡಲಾಗಿತ್ತು. ಮುಖ್ಯವಾಗಿ ಆ ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ಥೆರಪಿ ಮಾಡಲಾಗಿದ್ದು, ಇದರ ಪರಿಣಾಮ ಉತ್ತಮ ಫಲಿತಾಂಶ ದೊರೆತಿದೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಒಬ್ಬ ವ್ಯಕ್ತಿಗೆ ಏಪ್ರಿಲ್ 4ರಂದು ಕೊರೊನಾ ವೈರಸ್ ಸೋಂಕು ಇರುವುದು ದೃಢವಾಗಿತ್ತು. ಅದೇ ದಿನ ತೀವ್ರ ಉಸಿರಾಟದ ತೊಂದರೆ ಹಾಗೂ ಜ್ವರದ ಹಿನ್ನೆಲೆಯಲ್ಲಿ ಮಾಕ್ಸ್ ಆಸ್ಪತ್ರೆಗೆ ಆ ವ್ಯಕ್ತಿ ದಾಖಲಾಗಿದ್ದಾನೆ. ಆದರೆ, ಕೆಲವೇ ದಿನಗಳಲ್ಲಿ ಆತನ ಸ್ಥಿತಿ ಗಂಭೀರವಾಗಿ ನ್ಯುಮೋನಿಯಾ ಕೂಡ ಉಲ್ಬಣಗೊಂಡಿತ್ತು. ಈ ಹಿನ್ನೆಲೆಯಲ್ಲಿ ಆತನಿಗೆ ಏಪ್ರಿಲ್ 8ರಂದು ವೆಂಟಿಲೇಟರ್ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಯಿತು. ಆದರೆ, ಯಾವುದೇ ಸುಧಾರಣೆ ಕಂಡುಬರದ ಹಿನ್ನೆಲೆಯಲ್ಲಿ ಆತನಿಗೆ ಪ್ಲಾಸ್ಮಾ ಥೆರಪಿ ಮಾಡಲಾಗಿದೆ. ಇದರಿಂದ ಆತ ಚೇತರಿಸಿಕೊಂಡಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.