ನವದೆಹಲಿ:ಪೀರಾಗರ್ಹಿ ಪ್ರದೇಶದ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ವೇಳೆ ಕಾರ್ಖಾನೆ ಕುಸಿದು ಓರ್ವ ಅಗ್ನಿಶಾಮಕ ಸಿಬ್ಬಂದಿ ಸಾವಿಗೀಡಾಗಿದ್ದು ಸುಮಾರು 17 ಮಂದಿ ಗಾಯಗೊಂಡಿದ್ದರು. ಇದೀಗ ಕಾರ್ಖಾನೆ ಕುಸಿತದ ವಿಡಿಯೋ ಲಭ್ಯವಾಗಿದೆ.
ಅಗ್ನಿ ಅವಘಡದಿಂದ ಕಾರ್ಖಾನೆ ಕುಸಿತ ನಿನ್ನೆ ಮುಂಜಾನೆ 4 ಗಂಟೆ ಸುಮಾರಿಗೆ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿರುವ ವೇಳೆ ಕಾರ್ಖಾನೆ ಕುಸಿದು ಬಿದ್ದಿದೆ.
ಅಗ್ನಿಶಾಮಕ ಸಿಬ್ಬಂದಿ ಕಾರ್ಖಾನೆ ಮೇಲೆ ಏಣಿ ಹಾಕಿ ಮೇಲೇರಲು ಪ್ರಯತ್ನಿಸುತ್ತಿರುವ ದೃಶ್ಯ ಸೆರೆಯಾಗಿದೆ. ಇದೇ ವೇಳೆ ಕಟ್ಟಡ ಕುಸಿದ ಪರಿಣಾಮ ಓರ್ವ ಅಗ್ನಿಶಾಮಕ ಸಿಬ್ಬಂದಿ ಸಾವಿಗೀಡಾಗಿದ್ದು 17 ಜನ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ 12 ಮಂದಿ ಅಗ್ನಿಶಾಮಕ ಸಿಬ್ಬಂದಿಯೂ ಇದ್ದರು.
ನವದೆಹಲಿ ಮೂಲದ ಅಮಿತ್ ಬಲಿಯಾನ್ ಎಂಬ ಮೃತ ಅಗ್ನಿಶಾಮಕ ಅಧಿಕಾರಿ ಕುಟುಂಬಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒಂದು ಕೋಟಿ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಈಗಾಗಲೇ ಕಾರ್ಖಾನೆ ಮಾಲೀಕನ ಮೇಲೆ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.