ತೆಲಂಗಾಣ: ಹಣದ ವಿಚಾರ ಸಂಬಂಧ ಮಾಧ್ಯಮ ಛಾಯಾಗ್ರಾಹಕನಿಗೆ ಚೂರಿ ಇರಿದು ಕೊಲೆ ಮಾಡಿರುವ ಘಟನೆ ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ನಡೆದಿದೆ.
ಘಟನೆಯಲ್ಲಿ ಹಿರಿಯ ಮಾಧ್ಯಮ ಛಾಯಾಗ್ರಾಹಕ ಹಾಗೂ ವಾರಂಗಲ್ ಪ್ರೆಸ್ ಕ್ಲಬ್‌ನ ಖಜಾಂಚಿಯಾಗಿದ್ದ ಬೊಮ್ಮಿನೇನಿ ಸುನಿಲ್ ರೆಡ್ಡಿ (38) ಮೃತಪಟ್ಟಿದ್ದು, ಇವರ ಸ್ನೇಹಿತನಿಗೆ ಗಾಯಗಳಾಗಿವೆ.
ಘಟನೆಯ ಹಿನ್ನೆಲೆ:
ಸೋಮವಾರ ರಾತ್ರಿ ಪಾಸ್ರಾ ಗ್ರಾಮದ ಬೇಕರಿಯೊಂದರ ಮಾಲೀಕನಿಗೆ ನೀಡಿದ್ದ ಸಾಲದ ಬಾಕಿ ಹಣವನ್ನು ವಸೂಲಿ ಮಾಡಲು ಇವರಿಬ್ಬರು ಹೋದಾಗ ಮೂವರ ಮಧ್ಯೆ ಜಗಳ ಪ್ರಾರಂಭವಾಗಿದೆ. ಈ ವೇಳೆ ಬೇಕರಿ ಮಾಲೀಕನು ಅಡುಗೆ ಕೋಣೆಯಲ್ಲಿದ್ದ ಚಾಕುವಿನಿಂದ ಪತ್ರಕರ್ತ ಹಾಗೂ ಅವರ ಸ್ನೇಹಿತನಿಗೆ ಇರಿದಿದ್ದಾನೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಇವರಿಬ್ಬರನ್ನೂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲೆ ಪತ್ರಕರ್ತ ಸುನಿಲ್ ರೆಡ್ಡಿ ಮೃತಪಟ್ಟಿದ್ದು, ಅವರ ಸ್ನೇಹಿತನ ಸ್ಥಿತಿ ಗಂಭೀರವಾಗಿದೆ.