ಇಂದೋರ್ : ಮನೆಯಲ್ಲಿ ಬಡತನವೇ ಹಾಸು ಹೊದ್ದು ಮಲಗಿತ್ತು.ಹಸಿವು ನೀಗಿಸಿಕೊಳ್ಳೋದೇ ಕಷ್ಟ. ಅಂಥದರಲ್ಲಿ ಐಎಎಸ್ ಪಾಸ್ ಮಾಡುವ ಕನಸು ಕಾಣೋಕೆ ಆಗುತ್ತಾ. ಆದರೆ, ಜನ್ಮ ಕೊಟ್ಟ ಅಪ್ಪ ಮಗನಿಗೆ ನಿಜಕ್ಕೂ ಹೀರೋವಂತಾಗಿದ್ದ. ಮಗ ಓದುವ ಕನಸಿಗೆ ನೀರೆರೆದಿದ್ದ.
ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿ ಐಎಎಸ್ ಆಗ್ಬೇಕೆಂಬುದು ಯುವಕನ ಕನಸು. ಆದರೆ, ಬಡತನ ಯುವಕನ ಕನಸಿಗೆ ಅಡ್ಡಿಯಾಗಲೇ ಇಲ್ಲ. ಈಗ ಆತ ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿದ್ದಾನೆ. ಅದಕ್ಕೆ ಕಾರಣ ಅಪ್ಪ.. ಒನ್ ಅಂಡ್ ಒನ್ಲಿ ಅಪ್ಪ.
ಮಧ್ಯಪ್ರದೇಶದ ಇಂದೋರ್ನ ಪ್ರದೀಪ್ ಸಿಂಗ್ ಎಂಬ ಇನ್ನೂ ಮುಖದ ಮೇಲೆ ಸರಿಯಾಗಿ ಮೀಸೆಯೂ ಚಿಗುರದ ಹುಡುಗನ ಸ್ಟೋರಿ ಇದು.ತಂದೆ ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡಿ, ಹೇಗೋ ಮನೆ ನಡೆಸುತ್ತಿದ್ದರು. ಮಗ ಯುಪಿಎಸ್‌ಸಿ ಪರೀಕ್ಷೆಗಾಗಿ ತರಬೇತಿ ಪಡೆದುಕೊಳ್ಳುವ ಆಸೆ ವ್ಯಕ್ತಪಡಿಸಿದ್ದ. ಮಗನ ಆಸೆಗೆ ತಣ್ಣೀರು ಹಾಕಲು ತಂದೆಗೆ ಇಷ್ಟವಿರಲಿಲ್ಲ. ಆದರೆ, ಮಗನಿಗೆ ನೀಡಲು ತಂದೆ ಬಳಿ ಹಣವಿರಲಿಲ್ಲ. ಈ ಮಧ್ಯೆ ಗಟ್ಟಿ ಧೈರ್ಯ ಮಾಡಿದ ತಂದೆ ಇರುವ ಮನೆ ಮಾರಾಟ ಮಾಡಿ ಮಗನ ಶುಲ್ಕ ಭರಿಸಿದ್ದ.
ಯಾರು ಈ ಪ್ರದೀಪ್ ಸಿಂಗ್!?
ಪ್ರದೀಪ್ ಕೇವಲ 22 ವರ್ಷದ ಯುವಕ. 2017ರಲ್ಲಿ ಇಂದೋರ್ನ ಅಹಿಲ್ಯಾ ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದಿದ್ದಾನೆ. ನವದೆಹಲಿಯಲ್ಲಿ ಯುಪಿಎಸ್‌ಸಿ ಕೋಚಿಂಗ್ ಪಡೆದುಕೊಂಡ ಪ್ರದೀಪ್, ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ 93ನೇ ಸ್ಥಾನ ಗಿಟ್ಟಿಸಿದ್ದಾನೆ. 10ನೇ ವರ್ಗ ಹಾಗೂ ಸಿಬಿಎಸ್ಸಿ ಪರೀಕ್ಷೆಯಲ್ಲಿ ಶೇ.81ರಷ್ಟು ಅಂಕ ಪಡೆದು ಪಾಸ್ ಆಗಿದ್ದ ಈತನಿಗೆ ಮಹಿಳೆಯರ ಬಗ್ಗೆ ಹೆಚ್ಚು ಗೌರವವಂತೆ. ದೇಶದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಹೆಚ್ಚಿನ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ತಂದೆಯ ಸಂಭ್ರಮ :
'ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಮಾಡುವ ನಾನು ಮಗನನ್ನ ಓದಿಸಬೇಕು ಎಂಬ ಮಹದಾಸೆ ಇಟ್ಟುಕೊಂಡಿದ್ದೆ. ಆದರೆ, ಆತನ ಕೋಚಿಂಗ್ ಶುಲ್ಕ ಭರಿಸುವ ಹಣ ನನ್ನ ಹತ್ತಿರ ಇರಲಿಲ್ಲ. ಪ್ರದೀಪ್ ಯುಪಿಎಸ್ಸಿಗಾಗಿ ತರಬೇತಿ ತೆಗೆದುಕೊಳ್ಳುವ ವಿಷಯ ನನ್ಮುಂದೆ ಹೇಳಿದಾಗ ಮನೆ ಮಾಡಿ ಆತನ ಖರ್ಚು ಭರಿಸಿದೆ. ಈಗ ಆತ ನೆಮ್ಮದಿಯ ಜೀವನ ನಡೆಸಬಹುದು ಎಂದು ಪ್ರದೀಪ್ ತಂದೆ ಹೇಳಿಕೊಂಡಿದ್ದಾರೆ. ಜತೆಗೆ ತಮ್ಮ ಮಗ ಮೊದಲ ಪ್ರಯತ್ನದಲೇ ಯುಪಿಎಸ್‌ಸಿ ಪಾಸ್ ಮಾಡಿದ್ದಕ್ಕೆ ಸಂಭ್ರಮಿಸಿದ್ದಾರೆ.