ನವದೆಹಲಿ/ಬೆಂಗಳೂರು:ಶಾಸಕ ಸ್ಥಾನದಿಂದ ಅನರ್ಹಗೊಳಿಸಿರುವ ವಿಧಾನಸಭೆಯ ಈ ಹಿಂದಿನ ಸ್ಪೀಕರ್ ( ಕೆ. ಆರ್ ರಮೇಶ್ ಕುಮಾರ್) ಆದೇಶದ ಸಿಂಧುತ್ವ ಪ್ರಶ್ನಿಸಿ, 17 ಮಂದಿ ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ನಲ್ಲಿ ನಾಳೆಗೆ ಮುಂದೂಡಿದೆ.
ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಇಂದಿನಿಂದ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಕೋರ್ಟ್ ಸೋಮವಾರ ಹೇಳಿತ್ತು. ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ತ್ರಿಸದಸ್ಯ ವಿಭಾಗೀಯ ಪೀಠ ಈ ಮಹತ್ವದ ಅರ್ಜಿ ವಿಚಾರಣೆಯನ್ನು ನಾಳೆ ನಡೆಸಲಿದೆ. ನ್ಯಾಯಾಲಯದ ವಿಚಾರಣೆ ಹಿನ್ನೆಲೆಯಲ್ಲಿ ಅನರ್ಹ ಶಾಸಕರು ಈಗಾಗಲೇ ದೆಹಲಿಗೆ ತೆರಳಿದ್ದಾರೆ.
ಉಪಚುನಾವಣೆಯ ದಿನಾಂಕ ಬದಲಾವಣೆಗೆ ಚುನಾವಣಾ ಆಯೋಗ ಸಮ್ಮತಿಸಿದ್ದರೂ ಹೈಕೋರ್ಟ್ ಮೆಟ್ಟಿಲೇರಿರುವ ಕಾಂಗ್ರೆಸ್ ನಡೆಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ಶಾಸಕರ ರಾಜೀನಾಮೆ, ಅನರ್ಹತೆ, ಪಕ್ಷಾಂತರ ನಿಷೇಧ ಕಾಯ್ದೆ, ಸ್ಪೀಕರ್ ಅಧಿಕಾರ, ಆಪರೇಶನ್ ಕಮಲ, ಅನರ್ಹ ಶಾಸಕರು ಉಪ ಚುನಾವಣೆಗೆ ಸ್ಪರ್ಧಿಸುವ ಪ್ರಶ್ನೆಯೂ ಸೇರಿದಂತೆ ಹಲವಾರು ಗೊಂದಲಗಳು ಈ ಪ್ರಕರಣದಲ್ಲಿ ಅಡಗಿರುವುದರಿಂದ ಸುದೀರ್ಘ ವಿಚಾರಣೆ ನಡೆಯಲಿದೆ.
ರಾಜ್ಯದಲ್ಲಿ ಅನರ್ಹ ಶಾಸಕರ 15 ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಉಪ ಚುನಾವಣೆ ವೇಳಾಪಟ್ಟಿ ಘೋಷಣೆ ಮಾಡಿರುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ನಡೆಸುತ್ತಿರುವ ವಿಚಾರಣೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಅನರ್ಹ ಶಾಸಕರ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ತೆಗೆದುಕೊಳ್ಳುವಂತೆ ಕೇಂದ್ರ ಚುನಾವಣೆ ಆಯೋಗ ಸುಪ್ರೀಂಕೋರ್ಟ್ಗೆ ಮನವಿ ಮಾಡಿದೆ. ಈ ನಡುವೆ ಕಾಂಗ್ರೆಸ್ ಪಕ್ಷದ ಪರ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಶಾಸಕರ ಅರ್ಜಿ ವಿಚಾರಣೆಯನ್ನು ಒಂದು ತಿಂಗಳು ಮುಂದೂಡುವಂತೆ ಮನವಿ ಮಾಡಿದ್ದಾರೆ. ಅನರ್ಹ ಶಾಸಕರೂ ಸಹ ತುರ್ತಾಗಿ ವಿಚಾರಣೆ ನಡೆಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.
ಅಯೋಧ್ಯೆ ಪ್ರಕರಣದ ವಿಚಾರಣೆಯಿಂದಾಗಿ ಸುಪ್ರೀಂಕೋರ್ಟ್ ಅನರ್ಹ ಶಾಸಕರ ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿತ್ತು. ಈಗ ಅಯೋಧ್ಯೆ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದರಿಂದ ಅನರ್ಹ ಶಾಸಕರ ಅರ್ಜಿಯನ್ನು ವಿಚಾರಣೆಗೆ ಬಂದಿದೆ.
ಶಾಸಕತ್ವ ರದ್ದುಪಡಿಸಿರುವ ಸ್ಪೀಕರ್ ಆದೇಶ ರದ್ದುಪಡಿಸಬೇಕು ಹಾಗೂ ಉಪಚುನಾವಣೆಯಲ್ಲಿ ತಮಗೆ ಸ್ಪರ್ಧಿಸಲು ಅವಕಾಶ ನೀಡಬೇಕೆನ್ನುವುದು ಅನರ್ಹ ಶಾಸಕರ ಪ್ರಮುಖ ಮನವಿಯಾಗಿದೆ. ಪಕ್ಷಾಂತರ ನಿಷೇಧ ಕಾಯ್ದೆ ಉಲ್ಲಂಘಿಸಿ ಬಹುಮತದ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್ ತೀರ್ಪು ಎತ್ತಿಹಿಡಿಯಬೇಕೆನ್ನುವುದು ಕಾಂಗ್ರೆಸ್ ಪಕ್ಷ ಮತ್ತು ಮಾಜಿ ಸ್ಪೀಕರ್ ಅವರ ಮನವಿಯಾಗಿದೆ.
ಸುಪ್ರೀಂಕೋರ್ಟ್ನಲ್ಲಿ ನಡೆಯುತ್ತಿರುವ ಅರ್ಜಿ ವಿಚಾರಣೆ ಮೇಲಿನ ತೀರ್ಪು ಅನರ್ಹ ಶಾಸಕರ ರಾಜಕೀಯ ಭವಿಷ್ಯ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಭವಿಷ್ಯವನ್ನು ನಿರ್ಧರಿಸಲಿದೆ.