ತಿರುವನಂತಪುರಂ: ಕೇರಳದ ಕೊಚ್ಚಿ ಬಳಿಯ ಮರದು ಹತ್ತಿರ ನಾಲ್ಕು ಅಪಾರ್ಟ್‌ಮೆಂಟ್‌ಗಳನ್ನು ಕರಾವಳಿ ನಿಯಂತ್ರಣ ವಲಯದ (CRZ) ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕಳೆದ ವರ್ಷ ಮೇ ತಿಂಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಿದ 350 ಮನೆಗಳನ್ನು ನೆಲಸಮಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು.
4 ಅಪಾರ್ಟ್‌ಮೆಂಟ್‌ಗಳ ನೆಲಸಮಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಸ್ಫೋಟಕಗಳ ಸುರಕ್ಷತೆಯನ್ನು ಕಾಪಾಡುವ ಭಾರತದ ಪ್ರಧಾನ ಸಂಸ್ಥೆಯಾದ ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆ (ಪೆಸೊ) ಕಟ್ಟಡಗಳನ್ನು ನೆಲಸಮಗೊಳಿಸಲಿದೆ.
ಅಪಾರ್ಟ್ಮೆಂಟ್ ಸಂಕೀರ್ಣಗಳಾದ ಆಲ್ಫಾ ಸೆರೆನ್, ಜೈನ್ ಕೋರಲ್ ಕೋವ್ ಮತ್ತು ಗೋಲ್ಡನ್ ಕಯಲೋರಂ ಅನ್ನು ನೆಲಸಮಗೊಳಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಜನವರಿ 11 ಮತ್ತು 12 ರಂದು ನಿಯಂತ್ರಿತ ಸ್ಫೋಟದ ಮೂಲಕ ಈ ಫ್ಲ್ಯಾಟ್‌ಗಳನ್ನು ನೆಲಸಮ ಮಾಡಲಾಗುತ್ತದೆ.
ಸುರಕ್ಷಿತ ಉರುಳಿಸುವಿಕೆಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸ್ಫೋಟಕ ತಂತ್ರಜ್ಞಾನವನ್ನು ಸಂಸ್ಥೆ ಅಳವಡಿಸಿಕೊಳ್ಳಲಿದೆ. ಕಂಪನ ಅಧ್ಯಯನಕ್ಕೆ ಸಂಬಂಧಿಸಿದಂತೆ, ಐಐಟಿ ತಂಡವನ್ನು ರಚಿಸಲಾಗಿದೆ. ಅವರು ಎರಡು ದಿನಗಳಲ್ಲಿ (ಜ. 11 ಮತ್ತು 12) ಕಂಪನ ಅಧ್ಯಯನವನ್ನು ನಡೆಸಲಿದ್ದಾರೆ ಎಂದು ಪೆಸೊ ಸ್ಫೋಟಕಗಳ ಉಪಮುಖ್ಯ ನಿಯಂತ್ರಕ ಆರ್.ವೇಣುಗೋಪಾಲ್ ತಿಳಿಸಿದ್ದಾರೆ.
ಭಾರತದ ಪರಿಸರ ಸಂರಕ್ಷಣಾ ಕಾಯ್ದೆ ಎಂದರೇನು?
1986 ರ ಅಡಿಯಲ್ಲಿ, ಕರಾವಳಿ ಪ್ರದೇಶದಲ್ಲಿನ ಚಟುವಟಿಕೆಗಳನ್ನು ನಿಯಂತ್ರಿಸಲು ಪರಿಸರ ಮತ್ತು ಅರಣ್ಯ ಸಚಿವಾಲಯ (ಎಂಒಇಎಫ್) ಫೆಬ್ರವರಿ 1991 ರಲ್ಲಿ ಅಧಿಸೂಚನೆಯೊಂದನ್ನು ಹೊರಡಿಸಿದೆ. ಇದರ ಪ್ರಕಾರ, ಹೈಟೈಡ್ ಲೈನ್ (ಎಚ್‌ಟಿಎಲ್) ನಿಂದ 500 ಮೀಟರ್ ವರೆಗಿನ ಕರಾವಳಿ ಭೂಮಿಯನ್ನು ಮತ್ತು ಉಬ್ಬರವಿಳಿತದ ಏರಿಳಿತಗಳಿಗೆ ಒಳಪಡುವ ಕೊಲ್ಲಿಗಳು, ನದಿ ಮುಖಗಳು, ಹಿನ್ನೀರು ಮತ್ತು ನದಿಗಳ ತೀರದಲ್ಲಿ 100 ಮೀಟರ್ ಹಂತವನ್ನು ಕರಾವಳಿ ನಿಯಂತ್ರಣ ವಲಯ (ಸಿಆರ್ಝಡ್) ಎಂದು ಕರೆಯಲಾಗುತ್ತದೆ. ಕೈಗಾರಿಕೆಗಳು ಅಥವಾ ಸಂಸ್ಕರಣಾ ಪ್ಲೈಟ್‌ಗಳು ಇತ್ಯಾದಿಗಳ ಸ್ಥಾಪನೆ ಮತ್ತು ವಿಸ್ತರಣೆಗೆ ಅಧಿಸೂಚನೆಯು ನಿರ್ಬಂಧವನ್ನು ವಿಧಿಸಿತ್ತು.
ವಿಶೇಷ ಎಂದರೆ ಈ ಭಾಗ ವಿದೇಶಿ ಹಕ್ಕಿಗಳು ವಲಸೆ ಬರುವ ಪ್ರದೇಶವಾಗಿದೆ. ಪ್ರಶಾಂತ ಸರೋವರಕ್ಕೂ ಮರದ್ ಪ್ರದೇಶ ಹೆಸರುವಾಸಿಯಾಗಿದೆ ಮತ್ತು ಚಳಿಗಾಲದ ಅವಧಿಯಲ್ಲಿ ಇಲ್ಲಿಗೆ ಯುರೋಪ್ ರಾಷ್ಟ್ರಗಳಿಂದ ಪ್ರಮುಖ ಪಕ್ಷಿಗಳ ವಲಸೆ ಬಂದು ಗೂಡು ಕಟ್ಟಿ ಜೀವನ ರೂಪಿಸಿಕೊಳ್ಳುತ್ತವೆ. ಹೀಗಾಗಿ ಈ ಪ್ರದೇಶದಿಂದ ದೊಡ್ಡ ದೊಡ್ಡ ಅಪಾರ್ಟ್ಮೆಂಟ್ಗಳನ್ನ ತೆರವುಗೊಳಿಸಲು ಆದೇಶಿಸಿಲಾಗಿದೆ.