ಶ್ರೀನಗರ (ಜಮ್ಮು- ಕಾಶ್ಮೀರ):ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಬಂಧಿಸಿರುವ ವ್ಯಕ್ತಿಯನ್ನು 2018ರಲ್ಲಿಯೇ ಪಕ್ಷದಿಂದ ವಜಾ ಮಾಡಲಾಗಿದ್ದು, ಇನ್ನೂ ಆತ ಬಿಜೆಪಿಯ ಸರ್ಪಂಚ್ ಆಗಿರಲೇ ಇಲ್ಲ ಎಂದು ಬಿಜೆಪಿ ಜಮ್ಮು ಮತ್ತು ಕಾಶ್ಮೀರ ಘಟಕದ ವಕ್ತಾರ ಅಲ್ತಾಫ್ ಠಾಕೂರ್ ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.
ಉಗ್ರಗಾಮಿ ಸಂಪರ್ಕ ಹೊಂದಿದ್ದ ವ್ಯಕ್ತಿಯನ್ನು 2018ರಲ್ಲೇ ಪಕ್ಷದಿಂದ ತೆಗೆಯಲಾಗಿದೆ: ಬಿಜೆಪಿ ಅಮಾನತುಗೊಂಡ ಡಿಎಸ್ಪಿ ದೇವಿಂದರ್ ಸಿಂಗ್ ಅವರೊಂದಿಗಿನ ಸಂಪರ್ಕಕ ಹೊಂದಿದ್ದಕ್ಕಾಗಿ ಇತ್ತೀಚೆಗೆ ಎನ್ಐಎ ನಿಂದ ಬಂಧಿತನಾಗಿದ್ದ ತಾರಿಕ್ ಅಹ್ಮದ್ ಮಿರ್ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ 2018ರ ಅಕ್ಟೋಬರ್ ನಲ್ಲಿ ಪಕ್ಷದಿಂದ ತೆಗೆದುಹಾಕಲಾಗಿದೆ ಎಂದು ಠಾಕೂರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಮ್ಮು- ಕಾಶ್ಮೀರದಲ್ಲಿ ಪಕ್ಷೇತರ ಆಧಾರದ ಮೇಲೆ ಪಂಚಾಯತ್ ಚುನಾವಣೆ ನಡೆದಿದ್ದು, ತಾರಿಕ್ ಅಹ್ಮದ್ ಬಿಜೆಪಿ ಸರ್ಪಂಚ್ ಎಂಬ ವರದಿಗಳು ವಾಸ್ತವದಿಂದ ದೂರವಾಗಿವೆ. ಬಿಜೆಪಿಗೆ ಸಂಬಂಧಿಸಿದ ಪ್ರತಿಯೊಬ್ಬ ವ್ಯಕ್ತಿಯು ಕ್ಲೀನ್ ಟ್ರ್ಯಾಕ್ ರೆಕಾರ್ಡ್ ಹೊಂದಿರುತ್ತಾನೆ. ಉಗ್ರಗಾಮಿ ಸಂಪರ್ಕ ಅಥವಾ ಕ್ರಿಮಿನಲ್ ದಾಖಲೆಗಳನ್ನು ಹೊಂದಿರುವ ಜನರನ್ನು ನಾವು ಬೆಂಬಲಿಸುವುದಿಲ್ಲ. ಬಿಜೆಪಿ ಭೂತಕಾಲ, ವರ್ತಮಾನ ಮತ್ತು ಭವಿಷ್ಯದಲ್ಲೂ ಪಾರದರ್ಶಕತೆ ಇರುವವರೊಂದಿಗೆ ಮಾತ್ರ ನಿಲ್ಲುತ್ತದೆ ಎಂದು ಅವರು ಹೇಳಿದರು.
ಡಿಎಸ್ಪಿ ದೇವೀಂದರ್ ಸಿಂಗ್ ಅವರನ್ನು ಇದೇ ವರ್ಷ ಜನವರಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯಿಂದ ಅಮಾನತುಗೊಳಿಸಲಾಗಿದೆ. ದೆಹಲಿ ಮತ್ತು ದೇಶದ ಇತರ ಭಾಗಗಳಲ್ಲಿ ಭಯೋತ್ಪಾದಕ ದಾಳಿ ನಡೆಸಲು ಯೋಜಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಂಗ್‌ನನ್ನು ಬಂಧಿಸಲಾಗಿದೆ.