ನವದೆಹಲಿ:ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಕಮಾಂಡ್ ಹುದ್ದೆಗಳನ್ನು ನೀಡುವ ವಿಷಯದಲ್ಲಿ 'ಆಡಳಿತಾತ್ಮಕ' ಮತ್ತು 'ಮನಸ್ಥಿತಿ' ಬದಲಾವಣೆ ಅಗತ್ಯ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಬುಧವಾರ ಸೂಚಿಸಿದೆ.
ಸೇನೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಕಮಾಂಡ್ ಆಗಿ ನಿಯೋಜಿಸಬೇಕು ಎಂದು ಮಹಿಳಾ ಅಧಿಕಾರಿಗಳು ಸಲ್ಲಿಸಿದ ಅರ್ಜಿಯನ್ನು ಡಿ.ವೈ.ಚಂದ್ರದೂಡ್ ಮತ್ತು ಅಜಯ್ ರೋಸ್ತಗಿ ಅವರಿದ್ದ ನ್ಯಾಯಪೀಠ ಇಂದು ವಿಚಾರಣೆಗೆ ಕೈಗೆತ್ತಿಗೊಂಡಿತು.
ಮಹಿಳೆಯರಿಗೆ ಶಾಶ್ವತ ಆಯೋಗ ಒದಗಿಸಲು ವಿಭಿನ್ನವಾಗಿ ಯೋಚಿಸಬೇಕಿದೆ. ಅದಕ್ಕೆ ಆಡಳಿತಾತ್ಮಕ ಮತ್ತು ಮನಸ್ಥಿತಿ ಬದಲಾವಣೆ ಅನಿವಾರ್ಯ ಎಂಬ ಅಂಶಗಳ ಕುರಿತು ಸರ್ಕಾರ ತಿಳಿದುಕೊಳ್ಳಬೇಕಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಮಹಿಳೆಯರ ದೈಹಿಕ ದೃಢತೆ ಮತ್ತು ಅವಕಾಶಗಳು ಪುರುಷರಿಗಿಂತ ಭಿನ್ನವಾಗಿರುವ ಕಾರಣದಿಂದ ನಿಯೋಜನೆಯಲ್ಲಿ ಮಹಿಳಾ ಅಧಿಕಾರಿಗಳನ್ನು ಪುರುಷ ಅಧಿಕಾರಿಗಳಿಗೆ ಸಮಾನವಾಗಿ ಪರಿಗಣಿಸಲಾಗದು ಎಂದು ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್ ಹೇಳಿತ್ತು. ಇದರಿಂದಾಗಿ ಕಮಾಂಡ್ ನಿಯೋಜನೆಗೆ ನೇಮಕ ಮಾಡಬೇಕು ಎಂಬ ಮಹಿಳಾ ಅಧಿಕಾರಿಗಳ ಬೇಡಿಕೆಗೆ ವಿರೋಧ ವ್ಯಕ್ತಪಡಿಸಿತ್ತು.
ಸೇನೆಯಲ್ಲಿ ಬಹುತೇಕ ಪುರುಷರೇ ಇದ್ದಾರೆ ಹಾಗೂ ಬಹುತೇಕ ಇವರೆಲ್ಲರೂ ಗ್ರಾಮೀಣ ಹಿನ್ನೆಲೆಯಿಂದ ಬಂದವರು. ಸಾಮಾಜಿಕ ರೂಢಿಯ ಹಿನ್ನೆಲೆಯಲ್ಲಿ ಮಹಿಳೆಯರನ್ನು ಅಧಿಕಾರ ಸ್ಥಾನದಲ್ಲಿ ಸ್ವೀಕರಿಸುವ ಮನೋಸ್ಥಿತಿ ಸೈನಿಕರು ಇನ್ನೂ ಹೊಂದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿ, ವರದಿ ಸಲ್ಲಿಸಿತ್ತು.
ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ವಾದ ಮಂಡಿಸಿದರು. ವರದಿಯಲ್ಲಿ ಏನಿದೆ ಅದು ವಾದ ಮಂಡಿಸುವುದರ ಭಾಗವಲ್ಲ. ಪುರುಷನಷ್ಟೇ ಮಹಿಳೆಗೂ ಸಮಾನ ಅವಕಾಶ ಇದೆ ಎಂದು ನ್ಯಾಯಪೀಠ ಹೇಳಿತು. ಅದಕ್ಕೆ ಮನಸ್ಥಿತಿ ಬದಲಾವಣೆ ಅಗತ್ಯ ಇದೆ ಎಂದು ಸೂಚಿಸಿದೆ.