ಸಸಾರಾಮ್ (ಬಿಹಾರ):ಜಿದ್ದಾಜಿದ್ದಾ ಬಿಹಾರ ವಿಧಾನಸಭಾ ಚುನಾವಣೆ ಕಣ ರಂಗೇರುತ್ತಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಮೈತ್ರಿಕೂಟ ಬಿಹಾರದಲ್ಲಿ ಮತ್ತೊಂದು ಅವಧಿಗೆ ಅಧಿಕಾರ ಹಿಡಿಯುವ ಕಾತರತೆಯಲ್ಲಿದ್ದರೆ, ಮತ್ತೊಂದೆಡೆ ಯುವ ನಾಯಕ ತೇಜಸ್ವಿ ಯಾದವ್ ಎನ್ಡಿಎ ಮೈತ್ರಿಗೆ ಸವಾಲಾಗಿ ಪರಿಣಮಿಸುತ್ತಿದ್ದಾರೆ. ಸತತವಾಗಿ ಆಡಳಿತರೂಢ ಸರ್ಕಾರ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ತೇಜಸ್ವಿ ಯಾದವ್, ಇದೀಗ ತಮ್ಮ ತಂದೆಯ ಆಡಳಿತಾವಧಿಯನ್ನು ಜನರ ಮುಂದಿಡುವ ಮೂಲಕ ಕೊಂಡಾಡಿದ್ದಾರೆ.
ಅ. 28 ರಂದು ಮೊದಲ ಹಂತದ ಮತದಾನದ ಚುನಾವಣಾ ಪ್ರಚಾರ ಮುಕ್ತಾಯಗೊಳ್ಳಲಿದ್ದು, ರಾಜ್ಯದ ರೋಹ್ತಾಸ್ ಜಿಲ್ಲೆಯ ಡೆಹ್ರಿ ಪಟ್ಟಣದಲ್ಲಿ ನಡೆದ ಬೃಹತ್ ಸಾರ್ವಜನಿಕ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಹಿಂದಿನ ಲಾಲೂ ಪ್ರಸಾದ್ ಯಾದವ್ ಅವರ ಆಳ್ವಿಕೆಯಲ್ಲಿ ಬಿಹಾರ್ ರಾಜ್ಯದ ಜನರು ಉತ್ತಮ ಜೀವನ ನಡೆಸುತ್ತಿದ್ದರು. ಆದರೆ, ನಿತೀಶ್ ಕುಮಾರ್ ಆಳ್ವಿಕೆ ಬಂದ ಬಳಿಕ ಯಾವುದೇ ಸಾರ್ವಜನಿಕ ಪ್ರತಿನಿಧಿಯಾಗಲಿ ಅಥವಾ ಸಾಮಾನ್ಯ ವ್ಯಕ್ತಿಯಾಗಲಿ ಯಾರಿಗೂ ಸರಿಯಾದ ಪ್ರಾಮುಖ್ಯತೆ ನೀಡಿಲ್ಲ ಎಂದು ತಮ್ಮ ತಂದೆಯ ಆಡಳಿತಾವಧಿಯ ಸಾಧನೆಯನ್ನು ಜನರ ಮುಂದಿಟ್ಟರು.