ಹೈದರಾಬಾದ್ (ತೆಲಂಗಾಣ): ರಾಜ್ಯದಲ್ಲಿ ಬಿಜೆಪಿ ಹೆಜ್ಜೆಗುರುತುಗಳನ್ನು ವಿಸ್ತರಿಸದಂತೆ ತೆಲಂಗಾಣದ ಜನರು ತಡೆಯುತ್ತಾರೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್ ಮಹಾನಗರ ಪಾಲಿಕೆ ಫಲಿತಾಂಶದ ನಂತರ ಮಾತನಾಡಿದ ಅವರು, "ನಾವು ಪ್ರಜಾಪ್ರಭುತ್ವದ ಮಾರ್ಗದಲ್ಲಿ ಬಿಜೆಪಿಯ ವಿರುದ್ಧ ಹೋರಾಡುತ್ತೇವೆ. ರಾಜ್ಯದಲ್ಲಿ ಬಿಜೆಪಿ, ತನ್ನ ಹೆಜ್ಜೆ ಗುರುತು ವಿಸ್ತರಿಸುವುದನ್ನು ತೆಲಂಗಾಣದ ಜನರು ತಡೆಯುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.
"ನಾವು ಹೈದರಾಬಾದ್ ಜಿಹೆಚ್‌ಎಂಸಿ ಚುನಾವಣೆಯಲ್ಲಿ 44 ಸ್ಥಾನಗಳಲ್ಲಿ ಗೆದ್ದಿದ್ದೇವೆ. ಹೊಸದಾಗಿ ಚುನಾಯಿತರಾದ ಎಲ್ಲ ಕಾರ್ಪೊರೇಟರ್‌ಗಳೊಂದಿಗೆ ನಾನು ಮಾತನಾಡಿದ್ದೇನೆ. ನಾಳೆಯಿಂದಲೇ ತಮ್ಮ ಕೆಲಸ ಪ್ರಾರಂಭಿಸುವಂತೆ ಕೇಳಿಕೊಂಡಿದ್ದೇನೆ" ಎಂದು ತಿಳಿಸಿದ್ದಾರೆ.
ಟಿಆರ್ಎಸ್ ಪಕ್ಷ ತೆಲಂಗಾಣದ ಪ್ರಾದೇಶಿಕ ಮನೋಭಾವವನ್ನು ಪ್ರತಿನಿಧಿಸುತ್ತದೆ. ಕೆ.ಚಂದ್ರಶೇಖರ್ ರಾವ್ ಈ ಚುನಾವಣೆಯಲ್ಲಿ ಪಕ್ಷದ ಸಾಧನೆಯನ್ನು ಪರಿಶೀಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಡಳಿತಾರೂಢ ಟಿಆರ್ಎಸ್ ಪಕ್ಷ 55 ವಾರ್ಡ್ಗಳಲ್ಲಿ ಗೆಲುವು ಸಾಧಿಸಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಳೆದ ಚುನಾವಣೆಯಲ್ಲಿ ಕೇವಲ ನಾಲ್ಕು ಸ್ಥಾನ ಗೆದ್ದಿದ್ದ ಭಾರತೀಯ ಜನತಾ ಪಾರ್ಟಿ 48 ವಾರ್ಡ್ಗಳಲ್ಲಿ ಗೆಲುವು ಸಾಧಿಸುವ ಮೂಲಕ ಮಹತ್ಸಾಧನೆ ಮಾಡಿದೆ. ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ 44 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.