ಹೈದರಾಬಾದ್:ಅಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್ (ಒಸಿಡಿ) ಎಂಬುದು ಒಂದು ಮಾನಸಿಕ ರೋಗವಾಗಿದೆ. ಈ ಸಮಸ್ಯೆ ಇರುವ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಕಾರಣವೇ ಇಲ್ಲದೆ ಹೆದರಿಕೆ ಉಂಟಾಗುತ್ತಿರುತ್ತದೆ ಮತ್ತು ವಿಚಿತ್ರ ಚಿಂತನೆಗಳು ಮೂಡುತ್ತಿರುತ್ತವೆ. ಇದರಿಂದಾಗಿ ಇವರ ವರ್ತನೆಯೂ ವಿಚಿತ್ರವಾಗಿರುತ್ತದೆ. ಸಾಮಾನ್ಯವಾಗಿ ರೋಗಾಣುಗಳ ಬಗ್ಗೆ ಭಯ ಅಥವಾ ಸಾಮಗ್ರಿಗಳನ್ನು ಮಟ್ಟಸವಾಗಿ ಹೊಂದಿಸಿಡುವ ಅಭ್ಯಾಸಗಳನ್ನು ಒಸಿಡಿ ಹೊಂದಿರುವ ವ್ಯಕ್ತಿಗಳು ಪ್ರದರ್ಶಿಸುತ್ತಾರೆ. ವಿಪರೀತ ಶುಚಿತ್ವವನ್ನು ಪ್ರತಿನಿತ್ಯ ಅಭ್ಯಾಸ ಮಾಡುವ ಮೂಲಕ ಈ ಕೋವಿಡ್ 19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಒಸಿಡಿ ಹೊಂದಿರುವವರು ತುಂಬಾ ತೊಂದರೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಮೆಕ್‌ಲೀನ್ಸ್ ಒಸಿಡಿ ಇನ್‌ಸ್ಟಿಟ್ಯೂಟ್‌ನ ಕ್ಲಿನಿಕಲ್ ಅಸೆಸ್ಮೆಂಟ್ ಕೋ ಆರ್ಡಿನೇಟರ್ ನಥಾನಿಯಲ್ ವ್ಯಾನ್ ಕಿರ್ಕ್ ಹೇಳುವಂತೆ, ಒಸಿಡಿ ಹೊಂದಿರುವವರು ಯಾವ ರೀತಿಯ ಅಭ್ಯಾಸಗಳನ್ನು ಅಳವಡಿಸಿಕೊಂಡಿದ್ದಾರೆ ಎಂಬುದನ್ನು ಆಧರಿಸಿ ಕೊರೊನಾವೈರಸ್ ಸನ್ನಿವೇಶದಲ್ಲಿ ಅವರ ಪ್ರತಿಕ್ರಿಯೆಯೂ ಇರುತ್ತದೆ.
ಕೆಲವರಿಗೆ ಸಮಸ್ಯೆ ತೀವ್ರವಾಗಬಹುದು. ಸೋಂಕಿಗೆ ಒಳಗಾಗುವ ಹೆದರಿಕೆ ಅಥವಾ ರೋಗ ಕಾಣಿಸಿಕೊಳ್ಳುವ ಭೀತಿ ಅಥವಾ ಇತರರಿಂದ ರೋಗಾಣುಗಳ ಹರಡಬಹುದು ಎಂದು ಈಗಾಗಲೇ ಹೆದರಿದ್ದವರಲ್ಲಿ ಈ ಸಮಸ್ಯೆ ತೀವ್ರವಾಗಿ ಬಾಧಿಸಬಹುದು ಎಂದು ಅವರು ವಿವರಿಸಿದ್ದಾರೆ. ಇನ್ನು ಇತರ ಕೆಲವರಲ್ಲಿ ಯಾವ ಬದಲಾವಣೆಗಳೂ ಕಂಡುಬರುವುದಿಲ್ಲ. ತಾನು ಹಲವರ ಜೊತೆ ಮಾತನಾಡಿದ್ದು, ಕೋವಿಡ್ 19 ನಿಂದ ತಮಗೆ ಯಾವುದೇ ಹೆದರಿಕೆ ಉಂಟಾಗುತ್ತಿಲ್ಲ ಎಂದು ಒಸಿಡಿಯಿಂದ ಬಳಲುತ್ತಿರುವವರು ಹೇಳಿದ್ದಾಗಿ ವ್ಯಾನ್ ಕಿರ್ಕ್ ಹೇಳಿದ್ದಾರೆ. ಕೇವಲ ಇದೊಂದೇ ಅಲ್ಲ, ಅವರು ಹೊಂದಿರಬಹುದಾದ ಇತರ ಭೀತಿಗಳಿಗೂ ಕೋವಿಡ್ 19 ಸಾಂಕ್ರಾಮಿಕ ರೋಗದ ಈ ಸನ್ನಿವೇಶವು ಅವರನ್ನು ಇನ್ನಷ್ಟು ಚಿಂತಾಕ್ರಾಂತರನ್ನಾಗಿಸುವ ಸಾಧ್ಯತೆಯಿದೆ.
ಈಗ ಕಂಡುಬರುತ್ತಿರುವ ಆತಂಕಗಳ ರೀತಿಯಲ್ಲೇ ಒಸಿಡಿ ಗುಣಲಕ್ಷಣಗಳನ್ನು ಹೊಂದಿರುವ ರೋಗಿಗಳಲಿ ರೋಗ ಲಕ್ಷಣಗಳು ಉಲ್ಬಣಿಸುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ, ಕೊರೊನಾ ವೈರಸ್ ತಡೆಯುವುದಕ್ಕಾಗಿ ಕೆಲವು ಶುಚಿತ್ವ ಅಭ್ಯಾಸಗಳನ್ನು ನಾವು ಹೊಂದಿರಬೇಕು ಎಂಬ ಮುನ್ನೆಚ್ಚರಿಕೆಯನ್ನೇ ಈ ಒಸಿಡಿ ಗುಣಲಕ್ಷಣ ಹೊಂದಿರುವವರು ವಿಪರೀತವಾಗಿ ಆಚರಿಸುವ ಸಾಧ್ಯತೆ ಇರುತ್ತದೆ. ಈಗಾಗಲೇ ಹಲವು ಸಂಸ್ಥೆಗಳು ಕೈ ತೊಳೆಯುವುದು ಹೇಗೆ ಎಂಬ ಕುರಿತು ಸ್ಪಷ್ಟ ಮಾರ್ಗಸೂಚಿಗಳನ್ನು ಪ್ರಕಟಿಸಿವೆ. ಆದರೆ ವ್ಯಾನ್ ಕಿರ್ಕ್ ಹೇಳುವಂತೆ “ಒಸಿಡಿ ಗುಣಲಕ್ಷಣ ಹೊಂದಿರುವವರಿಗೆ ಪದೇ ಪದೇ ಕೈ ತೊಳೆಯಬೇಕೆಂಬ ಭಾವ ಉಂಟಾಗಬಹುದು. ಅಷ್ಟೇ ಅಲ್ಲ, ಅವರು ಈ ಸೂಚನೆಗಳನ್ನೇ ವಿಪರೀತವಾಗಿ ಆಚರಿಸಬಹುದು. ಅದರಲ್ಲೂ ಉದ್ವೇಗ ಮತ್ತು ಮಾನಸಿಕ ಅಸ್ಥಿರತೆ ಇದ್ದರಂತೂ ಇದು ವಿಪರೀತಕ್ಕೆ ಹೋಗಬಹುದು ಎಂದು ಅವರು ಹೇಳಿದ್ದಾರೆ.