ಸಾಲ್ಟ್ ಲೇಕ್ ಸಿಟಿ (ಅಮೆರಿಕ): ಅಮೆರಿಕದ ಉಪಾಧ್ಯಕ್ಷ ಮೈಕ್ ಪೆನ್ಸ್ ಹಾಗೂ ಮುಂಬರುವ ಚುನಾವಣೆಯಲ್ಲಿ ಅಮೆರಿಕ ಉಪಾಧ್ಯಕ್ಷ ಸ್ಥಾನದ ಪ್ರತಿಪಕ್ಷದ ಅಭ್ಯರ್ಥಿ, ಕ್ಯಾಲಿಫೋರ್ನಿಯಾ ಸೆನೇಟರ್ ಕಮಲಾ ಹ್ಯಾರಿಸ್ ಅವರ ನಡುವಿನ ಉಪಾಧ್ಯಕ್ಷೀಯ ಚುನಾವಣಾ ಡಿಬೇಟ್ ಇನ್ನೇನು ಕೆಲ ಹೊತ್ತಿನಲ್ಲೇ ಆರಂಭವಾಗಲಿದೆ. ಭಾರತೀಯ ಕಾಲಮಾನ ಗುರುವಾರ ಬೆಳಗ್ಗೆ 6.30 ಕ್ಕೆ ಚರ್ಚೆ ಆರಂಭವಾಗಲಿದ್ದು, ಜಗತ್ತಿನಾದ್ಯಂತ ಭಾರಿ ಕುತೂಹಲ ಕೆರಳಿಸಿದೆ. ಸದ್ಯ ಕೊರೊನಾ ಬಿಕ್ಕಟ್ಟು ಸೇರಿದಂತೆ ಇನ್ನೂ ಹಲವಾರು ಸಂದಿಗ್ಧಗಳಲ್ಲಿರುವ ಅಮೆರಿಕದ ಸಮಸ್ಯೆಗಳ ಪರಿಹಾರಕ್ಕೆ ಇವರಿಬ್ಬರೂ ತಮ್ಮದೇ ಆದ ನಿಲುವುಗಳನ್ನು ಜನರ ಮುಂದೆ ಮಂಡಿಸಲಿದ್ದಾರೆ.
ಅಮೆರಿಕದ ಸಾಲ್ಟ್ ಲೇಕ್ ನಗರದಲ್ಲಿ ನಡೆಯಲಿರುವ ಈ ಉಪಾಧ್ಯಕ್ಷೀಯ ಡಿಬೇಟ್ ಇತ್ತೀಚಿನ ಚುನಾವಣೆಗಳ ಇತಿಹಾಸದಲ್ಲೇ ಅತಿಹೆಚ್ಚು ಪ್ರಾಮುಖ್ಯತೆ ಪಡೆದಿರುವ ಡಿಬೇಟ್ ಎಂದು ವಿಶ್ಲೇಷಿಸಲಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ವಾರ ಕೊರೊನಾ ವೈರಸ್ನಿಂದ ಬಾಧಿತರಾಗಿ ಸದ್ಯ ಚೇತರಿಸಿಕೊಳ್ಳುತ್ತಿರುವ ಬೆನ್ನಲ್ಲೇ ಈ ಚುನಾವಣಾ ಡಿಬೇಟ್ ನಡೆಯುತ್ತಿದ್ದು, ಅಮೆರಿಕದ ಅಧ್ಯಕ್ಷೀಯ ಚುನಾವಣೆ ದಿನೇ ದಿನೆ ರಂಗು ಪಡೆದುಕೊಳ್ಳುತ್ತಿದೆ. ಅನಾರೋಗ್ಯದ ಕಾರಣದಿಂದ ತಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಹೇಳಿಕೊಳ್ಳಲು ಅಧ್ಯಕ್ಷ ಟ್ರಂಪ್ ಲಭ್ಯವಿಲ್ಲದ ಕಾರಣ ಅದೆಲ್ಲವನ್ನೂ ಉಪಾಧ್ಯಕ್ಷ ಮೈಕ್ ಪೆನ್ಸ್ ಅವರೇ ನಿಭಾಯಿಸಬೇಕಿದೆ.
ಕಮಲಾ ಹ್ಯಾರಿಸ್ ಅವರಿಗೆ ಈ ಡಿಬೇಟ್ ತಮ್ಮ ಜೀವಮಾನದಲ್ಲೇ ಅತಿ ದೊಡ್ಡ ಸಾರ್ವಜನಿಕ ಮುಖಾಮುಖಿಯಾಗಿದ್ದು, ತಮ್ಮ ಡೆಮೊಕ್ರಾಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಅವರ ಸಾಮರ್ಥ್ಯಗಳನ್ನು ಜನರ ಮುಂದೆ ಸಮರ್ಪಕವಾಗಿ ಬಿಂಬಿಸುವ ದೊಡ್ಡ ಸವಾಲು ಎದುರಾಗಿದೆ. ಅದರಲ್ಲೂ ಕೊರೊನಾ ಬಿಕ್ಕಟ್ಟು ಹಾಗೂ ಜನಾಂಗೀಯ ಘರ್ಷಣೆಗಳನ್ನು ನಿಭಾಯಿಸುವ ಕುರಿತಾಗಿ ಹ್ಯಾರಿಸ್ ಮಾತನಾಡಲಿದ್ದಾರೆ. ಈ ಮುನ್ನ ಸ್ವತಃ ವಕೀಲರಾಗಿದ್ದ ಕಮಲಾ ಹ್ಯಾರಿಸ್, ಜನಾಂಗೀಯ ಘರ್ಷಣೆಗಳಿಂದ ದೇಶದಲ್ಲಿ ಉಂಟಾಗಿರುವ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಬಗ್ಗೆ ಸಮರ್ಥವಾಗಿ ವಾದ ಮಂಡಿಸಲಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಮತದಾರರನ್ನು ಪರಿಗಣನೆಗೆ ತೆಗೆದುಕೊಂಡರೆ, ಒಂದೊಮ್ಮೆ ಸಂದರ್ಭ ಬಂದರೆ ಪೆನ್ಸ್ ಅಥವಾ ಹ್ಯಾರಿಸ್ ಈ ಇಬ್ಬರಲ್ಲಿ ಅಮೆರಿಕದ ಅಧ್ಯಕ್ಷರಾಗಲು ಯಾರು ಹೆಚ್ಚು ಸೂಕ್ತ ಎಂಬುದನ್ನು ನಿರ್ಧರಿಸಲು ಈ ಡಿಬೇಟ್ ಸಹಕಾರಿಯಾಗಲಿದೆ. ಕೊರೊನಾದಿಂದ ಬಳಲುತ್ತಿರುವ 74 ವರ್ಷದ ಟ್ರಂಪ್ ಹಾಗೂ 77 ವರ್ಷದ ಬಿಡೆನ್ ಈ ಇಬ್ಬರಲ್ಲಿ ಯಾರೊಬ್ಬರಾದರೂ ಮುಂದಿನ ಅಧ್ಯಕ್ಷರಾಗುವುದು ಬಹುತೇಕ ಕನಸಿನ ಮಾತು.