ನವದೆಹಲಿ:ರಾಜಧಾನಿಯಲ್ಲಿ ಕೋವಿಡ್-19 ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದಿರುವವರಿಗೆ ವಿಧಿಸುವ ದಂಡದ ಮೊತ್ತವನ್ನು 500 ರೂ.ಗಳಿಂದ 2,000 ರೂ.ಗೆ ಹೆಚ್ಚಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮ ಐಸಿಯು ಹಾಸಿಗೆಗಳಲ್ಲಿ ಶೇ. 80ರಷ್ಟು ಮತ್ತು ಐಸಿಯು ರಹಿತ ಶೇ. 60ರಷ್ಟು ಹಾಸಿಗೆಗಳನ್ನು ಕೋವಿಡ್-19 ರೋಗಿಗಳಿಗೆ ಕಾಯ್ದಿರಿಸಬೇಕು. ನಿರ್ಣಾಯಕವಲ್ಲದ ಶಸ್ತ್ರಚಿಕಿತ್ಸೆಗಳ ದಿನಾಂಕ ಮುಂದೂಡಲು ಸರ್ಕಾರ ನಿರ್ದೇಶನ ನೀಡಿದೆ ಎಂದರು.
ಗುರುವಾರ ರಾಜ್ಯಪಾಲರನ್ನು ಭೇಟಿಯಾಗಿ ಕೋವಿಡ್-19 ಪರಿಸ್ಥಿತಿಯ ಬಗ್ಗೆ ವಿವರಿಸಿದ್ದೇನೆ. ಬಹಳಷ್ಟು ಜನರು ಮಾಸ್ಕ್ ಧರಿಸುವುದಿಲ್ಲ ಎಂದು ತಿಳಿದು ಬಂದಿದೆ. ಆದ್ದರಿಂದ ಮಾಸ್ಕ್ ಧರಿಸದಿರುವವರಿಗೆ ದಂಡದ ಮೊತ್ತವನ್ನು 500 ರೂ.ನಿಂದ 2,000 ರೂ.ಗೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.
ಮಾಸ್ಕ್ ವಿತರಿಸಲು ಮತ್ತು ಧರಿಸಲು ಜನರನ್ನು ಒತ್ತಾಯಿಸುವಂತೆ ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಸಂಸ್ಥೆಗಳಿಗೆ ಮನವಿ ಮಾಡುತ್ತೇನೆ. ಕೋವಿಡ್-19 ವಿರುದ್ಧ ಮುಖಗವಸು ಪ್ರಮುಖ ರಕ್ಷಕವಾಗಿದೆ ಎಂದು ಕೋವಿಡ್-19 ಪರಿಸ್ಥಿತಿ ಚರ್ಚಿಸಲು ಕರೆದಿದ್ದ ಸರ್ವಪಕ್ಷ ಸಭೆಯ ಬಳಿಕ ಕೇಜ್ರಿವಾಲ್ ವಿಡಿಯೋ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಈ ಕುರಿತು ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸ್ ಮತ್ತು ಸರ್ಕಾರದ ಕಂದಾಯ ಇಲಾಖೆಯು ಜಾರಿ ಸಂಸ್ಥೆಗಳಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರನ್ನು ವಿಚಾರಣೆಗೆ ಒಳಪಡಿಸಬಹುದು.