ಜಮ್ಮು: ಪಿಡಿಪಿ ಯುವ ಅಧ್ಯಕ್ಷ ವಹೀದ್ ಪಾರಾ ಅವರನ್ನು ಮತ್ತೆ ಬಂಧಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ಮುಖ್ಯಸ್ಥ ಮೆಹಬೂಬಾ ಮುಫ್ತಿ ತಿಳಿಸಿದ್ದಾರೆ.
ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ಪಿಡಿಪಿ ಯುವ ಅಧ್ಯಕ್ಷ ವಹೀದ್ ಪಾರಾ ಅವರನ್ನು ಬಂಧಿಸಲಾಗಿತ್ತು. ಒಂದೂವರೆ ತಿಂಗಳು ಬಂಧನದಲ್ಲಿರಿಸಿದ್ದು ನಂತರ ಎನ್‌ಐಎ ನ್ಯಾಯಾಲಯದಿಂದ ಜಾಮೀನು ಪಡೆದು ಹೊರ ಬಂದಿದ್ದರು. ಇದೀಗ ಮತ್ತೆ ವಹೀದ್ ಅನ್ನು ಬಂಧಿಸಿದ್ದು, ಯಾವ ವಿಚಾರಣೆಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ಇನ್ನೂ ಸ್ಪಷ್ಟವಾಗಿಲ್ಲ.
ವಹೀದ್ ಪಾರಾ ಬಂಧನಕ್ಕೆ ಮೆಹಬೂಬಾ ಮುಫ್ತಿ ಕಳವಳ ವ್ಯಕ್ತಪಡಿಸಿದ್ದಾರೆ. "ಸಂಪೂರ್ಣವಾಗಿ ವಿಚಾರಣೆ ನಡೆಸಿದ ನಂತರ ಎನ್‌ಐಎ ನ್ಯಾಯಾಲಯವು ವಹೀದ್ಗೆ ಜಾಮೀನು ನೀಡಿದ್ದು, ಜಾಮೀನು ಪಡೆದು ಹೊರ ಬಂದ ನಂತರವೂ ಅವರನ್ನು ಈಗ ಜಮ್ಮುವಿನಲ್ಲಿ ಸಿಐಕೆ ವಶಕ್ಕೆ ಪಡೆದಿದೆ. ಇದು ಕಾನೂನು ಬಾಹಿರ ಮತ್ತು ಯಾವ ಕಾರಣಕ್ಕಾಗಿ ಆತನನ್ನು ಬಂಧಿಸಲಾಗಿದೆ ಎಂದು ತಿಳಿಸಬೇಕು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಉಗ್ರ ನಂಟಿನ ಆರೋಪದಡಿ ಕಳೆದ ವರ್ಷ ನವೆಂಬರ್ 25 ರಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿತ್ತು. ಇತ್ತೇಚೆಗೆ ನಡೆದ ಪುಲ್ವಾಮಾ ಜಿಲ್ಲಾ ಅಭಿವೃದ್ಧಿ ಪರಿಷತ್ ಚುನಾವಣೆಗೆ ಜೈಲಿನಲ್ಲಿದ್ದುಕೊಂಡೇ ವಹೀದ್ ಪಾರಾ ಸ್ಪರ್ಧಿಸಿ, ಬಿಜೆಪಿಯ ಸಾಜದ್ ಅಹ್ಮದ್ ರೈನಾ ಅವರನ್ನು ಸೋಲಿಸಿ ಭರ್ಜರಿ ಗೆಲುವು ಸಾಧಿಸಿದ್ದರು.