ಶ್ರೀನಗರ: ನೂತನ ಭೂಸುಧಾರಣಾ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ)ಯ ನಾಯಕರು ಹಾಗೂ ಕಾರ್ಯಕರ್ತರನ್ನು ಬಂಧಿಸಿರುವ ಪೊಲೀಸರು, ಶ್ರೀನಗರದಲ್ಲಿನ ಪಿಡಿಪಿ ಕಚೇರಿಯನ್ನು ಸೀಲ್ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಈ ನಡೆಯನ್ನು ಮಾಜಿ ಮುಖ್ಯಮಂತ್ರಿ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಖಂಡಿಸಿದ್ದಾರೆ.
"ಶ್ರೀನಗರದಲ್ಲಿ ಜಮ್ಮು-ಕಾಶ್ಮೀರ ಆಡಳಿತ ನಮ್ಮ ಕಚೇರಿಯನ್ನು ಮುಚ್ಚಿದೆ. ಶಾಂತಿಯುತ ಪ್ರತಿಭಟನೆಯನ್ನು ಆಯೋಜಿಸಿದ್ದಕ್ಕಾಗಿ ನಮ್ಮ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಜಮ್ಮುವಿನಲ್ಲಿ ಇದೇ ರೀತಿಯ ಪ್ರತಿಭಟನೆಗೆ ಅನುಮತಿ ನೀಡಲಾಗಿದೆ. ಆದರೆ ಇಲ್ಲಿ ಏಕೆ ತಡೆಯಲಾಗಿದೆ?" ಎಂದು ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 26 ರಂದು ಜಮ್ಮುವಿನಲ್ಲಿರುವ ಪಿಡಿಪಿ ಕಚೇರಿಗೆ ನುಗ್ಗಿದ ಬಿಜೆಪಿ ಕಾರ್ಯಕರ್ತರು, ಭಾರತ್ ಮಾತಾ ಕೀ ಜೈ ಘೋಷಣೆ ಕೂಗುತ್ತಾ ಕಚೇರಿ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ್ದರು.