ಡೆಹ್ರಾಡೂನ್: ಕೊರೊನಾ ವೈರಸ್‌ಗೆ ಲಸಿಕೆ ಕಂಡು ಹಿಡಿಯಲು ಜಗತ್ತಿನಾದ್ಯಂತ ಅಸಂಖ್ಯಾತ ಪ್ರಯತ್ನಗಳು ನಡೆಯುತ್ತಿರುವ ನಡುವೆ, ಹರಿದ್ವಾರದ ಪತಂಜಲಿ ಯೋಗಪೀಠ ಮೊದಲ ಆಯುರ್ವೇದಿಕ್ ಕೊರೊನಾ ಔಷಧ "ಕೊರೊನಿಲ್ "ನ್ನು ಇಂದು ಬಿಡುಗಡೆ ಮಾಡಲಿದೆ.
ಕೊರೊನಾ ರೋಗಿಗಳ ಮೇಲೆ ನಡೆಸಿದ ಸೋಂಕು ನಿಯಂತ್ರಣ ಕ್ಲಿನಿಕಲ್ ಪ್ರಯೋಗದ ಫಲಿತಾಂಶಗಳು ಸಕಾರಾತ್ಮಕವಾಗಿ ಬಂದಿವೆ. ಇಂದು ಬಿಡುಗಡೆ ಮಾಡಲಿರುವ ಔಷಧ ಸಂಪೂರ್ಣವಾಗಿ ಕ್ಲಿನಿಕಲ್ ಸಂಶೋಧನೆಯ ಆಧಾರವನ್ನಿಟ್ಟುಕೊಂಡು ತಯಾರಿಸಲಾಗಿದೆ ಎಂದು ಪತಂಜಲಿ ಆಯುರ್ವೇದ ಹೇಳಿದೆ. ಈ ಕುರಿತು ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಇಂದು ಮಧ್ಯಾಹ್ನ 1 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ಕೊರೊನಾ ವೈರಸ್ ನಿಯಂತ್ರಿಸಲು ಔಷಧ ಕಂಡು ಹಿಡಿಯುವಲ್ಲಿ ದೇಶದಲ್ಲಿ ಪತಂಜಲಿ ಮೊದಲ ಹಕ್ಕು ಸಾಧಿಸಿದೆ. ಪತಂಜಲಿ ಯೋಗ ಪೀಠ ಹರಿದ್ವಾರದಲ್ಲಿ ಇಂದು ಔಷಧ ಬಿಡುಗಡೆಯಾಗಲಿದೆ.
ಈ ಕುರಿತು ಪತಂಜಲಿ ಆಯುರ್ವೇದದ ಮುಖ್ಯಸ್ಥ ಆಚಾರ್ಯ ಬಾಲಕೃಷ್ಣ ತಮ್ಮ ಫೇಸ್‌ಬುಕ್ ಪೇಜ್ನಲ್ಲಿ ಮಾಹಿತಿ ನೀಡಿದ್ದು, ಕೊರೊನಾ ಸೋಂಕಿಗೆ ಮೊದಲ ಔಷಧ ಕೊರೊನಿಲ್ ಅನ್ನು ಸಂಪೂರ್ಣ ವೈಜ್ಞಾನಿಕ ದಾಖಲೆಯೊಂದಿಗೆ ನಾವು ಇಂದು ಮಧ್ಯಾಹ್ನ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಲು ಹೆಮ್ಮೆ ಪಡುತ್ತೇವೆ ಎಂದು ಬರೆದುಕೊಂಡಿದ್ದಾರೆ.
ಕೊರೊನಾ ಔಷಧ 'ಕೊರೊನಿಲ್' ಇಂದು ಬಿಡುಗಡೆ ಔಷಧ ಬಿಡುಗಡೆ ವೇಳೆ ಪ್ರಯೋಗದಲ್ಲಿ ಭಾಗಿಯಾಗಿರುವ ವಿಜ್ಞಾನಿಗಳು, ಸಂಶೋಧಕರು ಮತ್ತು ವೈದ್ಯರ ತಂಡವೂ ಇರಲಿದೆ. ಮಾಹಿತಿಯ ಪ್ರಕಾರ, ಈ ಸಂಶೋಧನೆಯನ್ನು ಹರಿದ್ವಾರದ ಪತಂಜಲಿ ರಿಸರ್ಚ್ ಇನ್ಸಿಟ್ಯೂಟ್ (ಪಿಆರ್ಐ) ಮತ್ತು ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ನಿಮ್ಸ್) ಜೈಪುರ ಜಂಟಿಯಾಗಿ ಮಾಡಿವೆ. ಹರಿದ್ವಾರದ ದಿವ್ಯಾ ಫಾರ್ಮಸಿ ಮತ್ತು ಪತಂಜಲಿ ಆಯುರ್ವೇದ ಲಿಮಿಟೆಡ್ ಔಷಧವನ್ನು ತಯಾರಿಸುತ್ತಿದೆ.