ನವದೆಹಲಿ:ಸದಾ ಒಂದಿಲ್ಲೊಂದು ವಿವಾದಿತ ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಳ್ಳುವ ಕೇಂದ್ರ ಮಾಜಿ ಸಚಿವ ಅನಂತ್ ಕುಮಾರ್ ಹೆಗಡೆ ಕಳೆದೆರಡು ದಿನಗಳ ಹಿಂದೆ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ ಕೆಲವರ ಕುರಿತು ವಿವಾದಿತ ಹೇಳಿಕೆ ನೀಡಿ ಎಲ್ಲರ ಕೆಂಗೆಣ್ಣಿಗೆ ಗುರಿಯಾಗಿದ್ದರು.
ಗಾಂಧೀಜಿ ವಿರುದ್ಧ ಅವಹೇಳನಕಾರಿ ಹೇಳಿಕೆ... ಬೇಷರತ್ ಕ್ಷಮೆಯಾಚಿಸಲು ಹೆಗಡೆಗೆ ಹೈಕಮಾಂಡ್ ಸೂಚನೆ! - ಸಂಸದ ಅನಂತ್ಕುಮಾರ್ ಹೆಗಡೆ
ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ ಕೆಲವರ ಕುರಿತು ವಿವಾದಿತ ಹೇಳಿಕೆ ನೀಡಿ ಇದೀಗ ಇಕ್ಕಟ್ಟಿಗೆ ಸಿಲುಕಿಕೊಂಡಿರುವ ಬಿಜೆಪಿ ಸಂಸದ ಅನಂತ್ಕುಮಾರ್ ಹೆಗಡೆ ವಿರುದ್ಧ ಬಿಜೆಪಿ ಹೈಕಮಾಂಡ್ ಚಾಟಿ ಏಟು ಬೀಸಿದೆ.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸಂಸದ ಅನಂತ್ ಕುಮಾರ್ ಹೆಗಡೆ, ಇಡೀ ಸ್ವಾತಂತ್ರ್ಯ ಚಳವಳಿಯನ್ನ ಬ್ರಿಟಿಷರ ಒಪ್ಪಿಗೆ ಮತ್ತು ಬೆಂಬಲದೊಂದಿಗೆ ನಡೆಸಲಾಯಿತು. ಕೆಲವರ ಹೋರಾಟ "ಡ್ರಾಮಾ" ಎನಿಸುತ್ತದೆ ಎಂದು ಹೇಳಿದ್ದರು. ಜತೆಗೆ ಯಾರು ದೇಶಕ್ಕಾಗಿ ಶಸ್ತ್ರ ಹಿಡಿದು ಹೋರಾಟಕ್ಕೆ ಇಳಿದರೋ ಅವರೆಲ್ಲಾ ನೇಣಿನ ಉರುಳಿಗೆ ಕೊರಳೊಡ್ಡಿದರು. ಯಾರು ತಮ್ಮ ಪ್ರಖರ ವಿಚಾರಧಾರೆಗಳನ್ನು ಇಟ್ಟುಕೊಂಡು ದೇಶ ಕಟ್ಟಲು ಯತ್ನಿಸಿದರೋ ಅವರೆಲ್ಲಾ ಕತ್ತಲೆ ಕೋಣೆಯಲ್ಲಿ ತಮ್ಮ ಬದುಕನ್ನು ಸವೆಸಿದರು. ಯಾರು ಬ್ರಿಟಿಷರ ಜೊತೆ ಒಪ್ಪಂದ ಮಾಡಿಕೊಂಡು ಸ್ವಾತಂತ್ರ್ಯ ಹೋರಾಟಗಾರ ಎಂಬ ಸರ್ಟಿಫಿಕೆಟ್ ತೆಗೆದುಕೊಂಡರೋ ಅವರೆಲ್ಲಾ ಇಂದು ಇತಿಹಾಸದ ಪುಟಗಳಲ್ಲಿ ರಾರಾಜಿಸುತ್ತಿದ್ದಾರೆ. ಈ ನಾಯಕರು ಎಂದು ಕರೆಯಲ್ಪಡುವ ಯಾರೊಬ್ಬರೂ ಒಮ್ಮೆ ಕೂಡ ಪೋಲೀಸರು ಹೊಡೆದಿಲ್ಲ, ಅವರ ಸ್ವಾತಂತ್ರ್ಯ ಚಳವಳಿ ಒಂದು ದೊಡ್ಡ ನಾಟಕವಾಗಿತ್ತು ಎಂದು ಹೇಳಿಕೆ ನೀಡಿದ್ದರು.
ಇವರ ನೀಡಿರುವ ಹೇಳಿಕೆಯಿಂದ ಅಸಮಾಧಾನಗೊಂಡಿರುವ ಭಾರತೀಯ ಜನತಾ ಪಾರ್ಟಿ ಹೈಕಮಾಂಡ್ ಬೇಷರತ್ ಕ್ಷಮೆಯಾಚನೆ ಮಾಡುವಂತೆ ಸೂಚನೆ ನೀಡಿದ್ದು, ಈಗಾಗಲೇ ನೋಟಿಸ್ ಸಹ ಜಾರಿಗೊಳಿಸಿದೆ ಎಂದು ತಿಳಿದು ಬಂದಿದೆ. ಅನಂತ್ಕುಮಾರ್ ಹೇಳಿಕೆ ನೀಡುತ್ತಿದ್ದಂತೆ ಈಗಾಗಲೇ ಕಾಂಗ್ರೆಸ್ ಸೇರಿದಂತೆ ವಿವಿಧ ಪ್ರತಿಪಕ್ಷಗಳು ಅವರ ಮೇಲೆ ಹರಿಹಾಯ್ದು ಕ್ಷಮೆ ಕೇಳುವಂತೆ ಪಟ್ಟು ಹಿಡಿದಿವೆ.