ನವದೆಹಲಿ: ಲಾಕ್ ಡೌನ್ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಲು ಜೂನ್ 3ರಂದು ಸಭೆಗೆ ಹಾಜರಾಗುವಂತೆ ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ, ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರನ್ನು ಕೋರಿದೆ.
ಸಮಿತಿಯ ಅಧ್ಯಕ್ಷ ಮತ್ತು ಹಿರಿಯ ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಜೂನ್ 3ರಂದು ಸಮಿತಿಯ ಸಭೆ ಕರೆದಿದ್ದು, ಎಲ್ಲಾ ಸದಸ್ಯರಿಗೆ ಮತ್ತು ಕೇಂದ್ರ ಗೃಹ ಕಾರ್ಯದರ್ಶಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೊರೊನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಮಾರ್ಚ್ 25ರಂದು ಲಾಕ್ ಡೌನ್ ಹೇರಿದ ನಂತರ ಸಂಸದೀಯ ಸಮಿತಿಯ ಮೊದಲ ಸಭೆ ಇದಾಗಲಿದೆ. ಲಾಕ್ ಡೌನ್ನಿಂದ ಉಂಟಾದ ಪರಿಸ್ಥಿತಿ ಮತ್ತು ರಾಜ್ಯಗಳ ಸಮನ್ವಯದ ಕುರಿತು ಸಮಿತಿಗೆ ಮಾಹಿತಿ ನೀಡಲು ಗೃಹ ಕಾರ್ಯದರ್ಶಿಗೆ ಸೂಚಿಸಲಾಗಿದೆ.
ಲಾಕ್ ಡೌನ್ ಅವಧಿಯಲ್ಲಿ ಸಾವಿರಾರು ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತಲುಪಲು ಪ್ರಯತ್ನಿಸುತ್ತಿರುವ ಬಗ್ಗೆಯೂ ಸಮಿತಿ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.