ನವದೆಹಲಿ: ಈ ವರ್ಷ ಪಾಕಿಸ್ತಾನ ಸೇನಾ ಪಡೆಗಳು 3800 ಬಾರಿ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ಮಾಡಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಪಾಕಿಸ್ತಾನ ಪಡೆಗಳು ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ನಡೆಸಿದ್ದು, ಭಯೋತ್ಪಾದನೆಗೂ ಬೆಂಬಲ ನೀಡುತ್ತಿವೆ. 'ಈ ವರ್ಷ ಪಾಕಿಸ್ತಾನ ಬರೋಬ್ಬರಿ 3800 ಬಾರಿ ಕದನ ವಿರಾಮ ನಿಯಮವನ್ನು ಉಲ್ಲಂಘನೆ ಮಾಡಿದೆ ಎಂದು ಎಂಇಎ ವಕ್ತಾರ ಅನುರಾಗ್ ಶ್ರೀವಾಸ್ತವ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ಹಣಕಾಸು ಕ್ರಿಯಾ ಕಾರ್ಯಪಡೆ ಸಭೆ ನಡೆಸುತ್ತಿದ್ದು, ಪಾಕಿಸ್ತಾನದ ಭಯೋತ್ಪಾದಕ ಚಟುವಟಿಕೆಗಳು ಹಾಗೂ ಹಣ ಕಳ್ಳ ಸಾಗಾಣಿಕೆ ಕುರಿತಂತೆ ಚರ್ಚೆ ನಡೆಯುತ್ತಿದೆ. ಈ ಶುಕ್ರವಾರ ಇದರ ಫಲಿತಾಂಶ ಹೊರ ಬೀಳಲಿದ್ದು, ಪಾಕಿಸ್ತಾನದ ಹಣೆಬರಹ ಹೊರ ಬೀಳಲಿದೆ.
ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಪ್ಲೆನರಿ ಮೀಟ್ ನಡೆಯುತ್ತಿದೆ. ಗ್ರೇ ಲಿಸ್ಟ್ ನಲ್ಲಿ ಪಾಕಿಸ್ತಾನ ಮುಂದುವರಿಯುತ್ತದೆಯೋ ಇಲ್ಲವೋ ಎಂಬ ಬಗ್ಗೆ ಅಂತಿಮ ತೀರ್ಮಾನ ಪ್ರಕಟವಾಗಲಿದೆ.
ಎಫ್‌ಎಟಿಎಫ್ ಭೇಟಿಯ ಕುರಿತು ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಎಂಇಎ ವಕ್ತಾರರು, “ಪಾಕಿಸ್ತಾನವು ತಮ್ಮ ಕ್ರಿಯಾ ಯೋಜನೆಯಡಿ ಅವರಿಗೆ ನೀಡಲಾಗಿರುವ 27 ಕ್ರಿಯಾಶೀಲ ಕಾರ್ಯಗಳ ಪೈಕಿ ಇದುವರೆಗೆ ಕೇವಲ 21 ಕ್ರಿಯಾಶೀಲ ಕಾರ್ಯಗಳನ್ನು ಮಾತ್ರ ಉದ್ದೇಶಿಸಿದೆ. ಇನ್ನೂ ಆರು ಪ್ರಮುಖ ಕ್ರಿಯಾ ವಸ್ತುಗಳ ಬಗ್ಗೆ ಗಮನಹರಿಸಿಲ್ಲ. ಎಲ್ಲರಿಗೂ ತಿಳಿದಿರುವಂತೆ ಪಾಕಿಸ್ತಾನ ಭಯೋತ್ಪಾದಕ ಘಟಕಗಳು ಮತ್ತು ವ್ಯಕ್ತಿಗಳಿಗೆ ಆಶ್ರಯ ತಾಣವನ್ನು ಒದಗಿಸುತ್ತಿದೆ.
ಹಲವಾರು ಭಯೋತ್ಪಾದಕ ಘಟಕಗಳು ಮತ್ತು ವ್ಯಕ್ತಿಗಳ ವಿರುದ್ಧ ಪಾಕಿಸ್ತಾನ ಯಾವುದೇ ಕ್ರಮ ಕೈಗೊಂಡಿಲ್ಲ, ಯುಎನ್‌ಎಸ್‌ಸಿ ನಿಷೇಧಿಸಿರುವ ಮಸೂದ್ ಅಜರ್, ದಾವೂದ್ ಇಬ್ರಾಹಿಂ ಮತ್ತು ಜಾಕಿಯೂರ್ ರೆಹಮಾನ್ ಲಖ್ವಿ ಸೇರಿದಂತೆ ಶ್ರೀವಾಸ್ತವ ಪುನರುಚ್ಚರಿಸಿದ್ದಾರೆ.