ಶ್ರೀನಗರ:ಭಾರತ- ಪಾಕ್ ಗಡಿ ನಿಯಂತ್ರಣ ರೇಖೆಯ ಬಳಿ ಉಭಯ ದೇಶಗಳ ಸೇನೆಯ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಈ ವೇಳೆ ಕಾಶ್ಮೀರದೊಳಗೆ ನುಗ್ಗಲೆತ್ನಿಸಿದ ಪಾಕ್ ಸೇನೆಯ ಬಾರ್ಡರ್ ಆ್ಯಕ್ಷನ್ ತಂಡದ 7 ಮಂದಿಯನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಈ ಘಟನೆ ಕೆರನ್ ಸೆಕ್ಟರ್‌ನಲ್ಲಿ ನಡೆದಿದೆ.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಯೋಧರು ದಾಳಿ ನಡೆಸಿದ್ದಾರೆ ಎಂಬ ಮಾಹಿತಿಯನ್ನು ಪಾಕಿಸ್ತಾನ ಮಾಧ್ಯಮಗಳು ಪ್ರಸಾರ ಮಾಡಿದ್ದವು. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಭಾರತೀಯ ಸೇನೆ, ಗಡಿಯೊಳಗೆ ನಿರಂತರವಾಗಿ ಉಗ್ರರು ಹಾಗೂ ನುಸುಕೋರರು ನುಗ್ಗುತ್ತಿರುವ ಕಾರಣ ಅವರ ವಿರುದ್ಧ ಮಾತ್ರ ನಮ್ಮ ಸೇನೆ ಕಾರ್ಯಾಚರಣೆ ನಡೆಸುತ್ತಿದ್ದು, ಅಲ್ಲಿನ ಯೋಧರಿಗೆ ಹಾಗೂ ನಾಗರಿಕರಿಗೆ ಯಾವುದೇ ರೀತಿಯ ತೊಂದರೆ ನೀಡುತ್ತಿಲ್ಲ ಎಂದು ಪ್ರಕಟನೆಯಲ್ಲಿ ತಿಳಿಸಿತ್ತು.