ಶ್ರೀನಗರ: ಕೊರೊನಾ ಸೋಂಕಿತ ಉಗ್ರರನ್ನ ಪಾಕಿಸ್ತಾನ ಜಮ್ಮು-ಕಾಶ್ಮೀರಕ್ಕೆ ಕಳುಹಿಸುತ್ತಿದೆ ಎಂದು ಡಿಜಿಪಿ ದಿಲ್ಬಾಗ್ ಸಿಂಗ್ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ.
ಉತ್ತರ ಕಾಶ್ಮೀರದ ಗಂಡರ್‌ಬಲ್ ಜಿಲ್ಲೆಯಲ್ಲಿರುವ ಕ್ವಾರಂಟೈನ್ ಕೇಂದ್ರಗಳಿಗೆ ಭೇಟಿ ನೀಡಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ದಿಲ್ಬಾಗ್ ಸಿಂಗ್, ಇಲ್ಲಿಯವರೆಗೆ ಶಸ್ತ್ರಾಸ್ತ್ರಗಳೊಂದಿಗೆ ಉಗ್ರರನ್ನು ಜಮ್ಮು-ಕಾಶ್ಮೀರಕ್ಕೆ ಕಳುಹಿಸುತ್ತಿತ್ತು. ಆದರೆ ಈಗ ಕೋವಿಡ್-19 ಸೋಂಕು ಹೊಂದಿರುವ ಉಗ್ರರನ್ನು ಕಳುಹಿಸುತ್ತಿದೆ ಎಂದು ಹೇಳಿದರು.
ಸೋಂಕಿತ ಉಗ್ರರು, ತಾವು ಅಡಗಿಕೊಳ್ಳುವ ಅಥವಾ ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ಭೇಟಿ ನೀಡುವ ಪ್ರದೇಶಗಳಲ್ಲಿ ವೈರಸ್ ಅನ್ನು ಹರಡಬಹುದು. ಹೀಗಾಗಿ ಈ ಕುರಿತು ಎಚ್ಚರ ವಹಿಸುವಂತೆ ಜನರಿಗೆ ಸಿಂಗ್ ಸೂಚನೆ ನೀಡಿದ್ದಾರೆ.
ಇತ್ತ ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಸವಾಲನ್ನು ಎದುರಿಸುತ್ತಿದ್ದರೆ ಅತ್ತ ಸಮಯ ಸಾಧಿಸುತ್ತಿರುವ ಪಾಕಿಸ್ತಾನ ತನ್ನ ಉಗ್ರರನ್ನು ಭಾರತಕ್ಕೆ ಕಳುಹಿಸುತ್ತಿದ್ದು, ಗಡಿ ಭಾಗದಲ್ಲಿ ಕದನ ವಿರಾಮ ಉಲ್ಲಂಘಿಸುತ್ತಿದೆ. ಇಂದು ಬೆಳಗ್ಗೆಯಷ್ಟೇ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಭದ್ರತಾ ಪಡೆ ನಾಲ್ವರು ಉಗ್ರರನ್ನು ಸೆದೆಬಡಿದಿತ್ತು.