ನವದೆಹಲಿ: ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿಯ ಇಬ್ಬರು ಸಿಬ್ಬಂದಿಯನ್ನು ಪಾಕಿಸ್ತಾನ ಭದ್ರತಾ ಪಡೆಗಳು ಬಂಧಿಸಿ ಹಿಂಸೆ ನೀಡಿದ್ದನ್ನು ಭಾರತ ಉಗ್ರವಾಗಿ ಖಂಡಿಸಿದೆ. ನವದೆಹಲಿಯಲ್ಲಿರುವ ಪಾಕ್ ರಾಯಭಾರ ಕಚೇರಿಯ ರಾಯಭಾರಿ (ಹಂಗಾಮಿ) ಹೈದರ್ ಶಾ ಅವರನ್ನು ಕರೆಸಿ, ಈ ಕುರಿತು ಪಾಕಿಸ್ತಾನಕ್ಕೆ ಕಟುವಾದ ಶಬ್ಧಗಳಲ್ಲಿ ಇಂದು ಎಚ್ಚರಿಕೆ ನೀಡಲಾಗಿದೆ.
ಭಾರತೀಯ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳನ್ನು ಪಾಕ್ ಭದ್ರತಾ ಪಡೆಗಳು ಜೂನ್ 15ರಂದು ಬಲವಂತವಾಗಿ ಅಪಹರಿಸಿ 10 ಗಂಟೆಗೂ ಅಧಿಕ ಕಾಲ ಅಕ್ರಮ ಬಂಧನದಲ್ಲಿಟ್ಟು ಹಿಂಸೆ ನೀಡಿದ್ದವು. ಇಸ್ಲಾಮಾಬಾದ್ನಲ್ಲಿನ ಭಾರತೀಯ ರಾಯಭಾರ ಕಚೇರಿ ಹಾಗೂ ದೆಹಲಿಯ ವಿದೇಶಾಂಗ ಇಲಾಖೆಯ ಹಸ್ತಕ್ಷೇಪದ ನಂತರವೇ ಪಾಕ್ ಅವರನ್ನು ಬಿಡುಗಡೆ ಮಾಡಿತ್ತು. ಬಂಧನದ ವೇಳೆ ಭಾರತೀಯ ಅಧಿಕಾರಿಗಳನ್ನು ವ್ಯಾಪಕ ವಿಚಾರಣೆಗೆ ಗುರಿಪಡಿಸಿ ಹಿಂಸಿಸಲಾಗಿತ್ತು. ಅಲ್ಲದೇ ಯಾವುದೋ ಸುಳ್ಳು ಅಪರಾಧ ಪ್ರಕರಣದಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಒಪ್ಪಿಕೊಳ್ಳುವಂತೆ ಒತ್ತಡ ಹೇರಲಾಗಿತ್ತು.