ನವದೆಹಲಿ:ಇನ್ನೇನು ಲೋಕಸಭೆ ಚುನಾವಣೆ ಆರಂಭಗೊಳ್ಳಲಿದ್ದು, ಈ ಮಧ್ಯೆ ಉಗ್ರರ ದಾಳಿಯ ಆತಂಕವೂ ಎದುರಾಗಿದೆ. ಚುನಾವಣೆ ವೇಳೆ ಪಾಕ್ ಮೂಲದ ಉಗ್ರ ಸಂಘಟನೆಗಳು ಕಾಶ್ಮೀರದಲ್ಲಿ ದಾಳಿ ನಡೆಸಲು ಪ್ಲಾನ್ ಮಾಡಿಕೊಂಡಿವೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಪಾಕಿಸ್ತಾನದ ಇಂಟರ್ ಸರ್ವೀಸ್ ಇಂಟಲಿಜೆನ್ಸ್ (ಐಎಸ್ಐ) ಮೂರು ಉಗ್ರರ ತಂಡಗಳನ್ನು ರಚಿಸಿದ್ದು, ಲಷ್ಕರ್ ಎ ತೊಯ್ಬಾ, ಜೈಷೆ ಮೊಹಮ್ಮದ್ ಉಗ್ರರನ್ನು ಭಾರತದೊಳಗೆ ಛೂ ಬಿಡಲು ಸಿದ್ಧಗೊಳಿಸಿದೆ. ಈ ತಂಡಗಳಲ್ಲದೇ, ದಾಳಿ ನಡೆಸಲು ಆಫ್ಘಾನಿಸ್ತಾನ ಮೂಲದ ಉಗ್ರರಿಗೆ ಸಹ ತರಬೇತಿ ನೀಡಲಾಗಿದೆ ಎಂದು ಗುಪ್ತಚರ ಮಾಹಿತಿ ಬಂದಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಏಪ್ರಿಲ್ 11ರಿಂದ ಮೇ 6ರವೆರೆಗೆ ಐದು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಇದಾದ ನಂತರ ರಾಜ್ಯದ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ರಾಜ್ಯದಲ್ಲಿ ಭದ್ರತೆ ವಿಚಾರವಾಗಿ ಗೃಹ ಇಲಾಖೆ ಹಾಗೂ ಚುನಾವಣಾ ಆಯೋಗದ ನಡುವೆ ಇತ್ತೀಚೆಗೆ ಉನ್ನತ ಹಂತದ ಮಾತುಕತೆ ನಡೆಸಿದೆ. ಸಭೆಯಲ್ಲಿ ಕಣಿವೆ ರಾಜ್ಯಕ್ಕೆ 800 ಅರೆ ಸೇನಾ ಪಡೆಯನ್ನು ಕಳುಹಿಸುವ ನಿರ್ಧಾರ ಮಾಡಲಾಗಿದೆ.
ಭಾರತ ನಡೆಸಿದ ಏರ್ಸ್ಟ್ರೈಕ್ನಿಂದಾಗಿ ಕತ್ತಿ ಮಸೆಯುತ್ತಿರುವ ಪಾಕ್, ಇಲ್ಲಿನ ಚುನಾವಣೆಗೆ ಅಡ್ಡಗಾಲು ಹಾಕಲು ಹವಣಿಸುತ್ತಿದೆ ಎನ್ನಲಾಗ್ತಿದೆ. ಉಗ್ರರ ಮೂಲಕ ಈ ಕೃತ್ಯ ಎಸಗಲು ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.
ಜಮ್ಮು ಮತ್ತು ಕಾಶ್ಮೀರದ ಪಂಚಾಯಿತಿ ಚುನಾವಣೆ ವೇಳೆಯೂ ಉಗ್ರರು ಜನರಿಗೆ ಬೆದರಿಕೆಯೊಡ್ಡಿದ್ದರು. ಆ ನಂತರ ನಡೆದ ಪುಲ್ವಾಮ ದಾಳಿ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.