ಕರ್ನಾಟಕ

karnataka

ETV Bharat / bharat

ಗಡಿದಾಟಿ ಉಗ್ರನೆಲೆ ಧ್ವಂಸಗೊಳಿಸಿದ ಭಾರತೀಯ ಸೇನೆ; ಪ್ರತಿಭಟಿಸಿದ ಪಾಕ್ - ಪಾಕಿಸ್ತಾನದಿಂದ ಶೆಲ್ಲಿಂಗ್ ದಾಳಿ

ಪಾಕಿಸ್ತಾನದ ಶೆಲ್ಲಿಂಗ್ ದಾಳಿಯಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದರೆ, ಇದೇ ವೇಳೆ ಓರ್ವ ನಾಗರಿಕ ಪ್ರಾಣ ಕಳೆದುಕೊಂಡಿದ್ದಾನೆ. ಶೆಲ್ಲಿಂಗ್ ದಾಳಿಯಲ್ಲಿ ಮೂವರು ನಾಗರಿಕರು ಗಾಯಗೊಂಡಿದ್ದು, ಒಂದು ಮನೆ ಹಾಗೂ ಅಕ್ಕಿ ಗೋಡೌನ್‌ಗೆ​ ಸಂಪೂರ್ಣ ಹಾನಿಯಾಗಿದೆ.

ಅಪ್ರಚೋದಿತ ದಾಳಿಗೆ ಇಬ್ಬರು ಸೈನಿಕರು ಹುತಾತ್ಮ

By

Published : Oct 20, 2019, 11:18 AM IST

Updated : Oct 20, 2019, 6:21 PM IST

ಕಥುವಾ(ಜಮ್ಮು ಕಾಶ್ಮೀರ): ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನದಿಂದ ಅಪ್ರಚೋದಿತ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರ ತಾಣಗಳನ್ನು ಧ್ವಂಸ ಮಾಡಿದೆ. ಭಾರತದ ನಡೆಗೆ ಪಾಕ್​ ಪ್ರತಿಭಟನೆ ವ್ಯಕ್ತಪಡಿಸಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಭಯೋತ್ಪಾದಕರಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಭಾರತೀಯ ಸೇನೆ, ಪಾಕ್​ ಆಕ್ರಮಿತ ಕಾಶ್ಮೀರದ ಜುರಾ, ಅತ್ಮುಕಾಮ್ ಮತ್ತು ಕುಂದಲ್ಸಾಹಿಯಲ್ಲಿ ಉಗ್ರರ ಲಾಂಚ್​ಪ್ಯಾಡ್​ಗಳ ಮೇಲೆ ದಾಳಿ ನಡೆಸಿದೆ. ಘಟನೆ ನಂತರ ಪಾಕಿಸ್ತಾನದ ವಿದೇಶಾಂಗ ಕಚೇರಿಗೆ ಭಾರತೀಯ ಡೆಪ್ಯೂಟಿ ಹೈಕಮಿಷನರ್ ಗೌರವ್​ ಅಹ್ಲುವಾಲಿಯಾ ಅವರನ್ನ ಕರೆಸಿಕೊಂಡ ಪಾಕ್,​ ತನ್ನ ಪ್ರತಿಭಟನೆ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.

ಇಂದು ಮುಂಜಾನೆ ಪಾಕಿಸ್ತಾನ ಭಾಗದಿಂದ ಶೆಲ್ ದಾಳಿ ನಡೆದಿದ್ದು ಈ ವೇಳೆ ಇಬ್ಬರು ಯೋಧರು ಹುತಾತ್ಮರಾಗಿ, ಓರ್ವ ನಾಗರಿಕ ಪ್ರಾಣ ಕಳೆದುಕೊಂಡಿದ್ದ. ಶೆಲ್ಲಿಂಗ್ ದಾಳಿಯಲ್ಲಿ ಮೂವರು ನಾಗರಿಕರು ಗಾಯಗೊಂಡಿದ್ದು, ಒಂದು ಮನೆ ಹಾಗೂ ಅಕ್ಕಿ ಗೋಡೌನ್‌ಗೆ ಸಂಪೂರ್ಣ ಹಾನಿಯಾಗಿತ್ತು.

ಪಾಕಿಸ್ತಾನದ ಅಪ್ರಚೋದಿತ ದಾಳಿಗೆ ತಕ್ಷಣವೇ ಭಾರತೀಯ ಸೇನೆ ದಿಟ್ಟ ಪ್ರತ್ಯುತ್ತರ ನೀಡಿದ್ದು, ಪಿಒಕೆ ಪ್ರಾಂತ್ಯದಲ್ಲಿ ಸಕ್ರಿಯವಾಗಿದ್ದ ನಾಲ್ಕು ಉಗ್ರತಾಣಗಳನ್ನು ಧ್ವಂಸಗೊಳಿಸುವಲ್ಲಿ ಸೇನೆ ಸಫಲವಾಗಿದೆ. ತಾಂಗ್​​ಧರ್ ಸೆಕ್ಟರ್​ನ ನೀಲಂ ವ್ಯಾಲಿಯಲ್ಲಿದ್ದ ಉಗ್ರರ ತಾಣ ನಾಶವಾಗಿದೆ.

ಭಾರತೀಯ ಸೇನೆಯ ಈ ಪ್ರತಿದಾಳಿಯಲ್ಲಿ ನಾಲ್ಕರಿಂದ ಐವರು ಪಾಕ್ ಸೈನಿಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಮಕ್ಕಳು ಬಚಾವ್​:

ಪಾಕಿಸ್ತಾನದ ಶೆಲ್​ ದಾಳಿ ಬಗ್ಗೆ ಪ್ರತಿಕ್ರಿಯಿಸಿರುವ ಹಿರಾನಗರದ ನಿವಾಸಿಗಳು, ಅದೃಷ್ಟವಶಾತ್ ನಮ್ಮ ಮಕ್ಕಳು ಮನೆಯಲ್ಲಿ ನಿದ್ರಿಸುತ್ತಿರಲಿಲ್ಲ. ಈ ದಾಳಿಯ ಬಗ್ಗೆ ಪ್ರಧಾನಿಗಳು ಕಠಿಣ ನಿಲುವು ತೆಗೆದುಕೊಳ್ಳಬೇಕು ಮತ್ತು ಪಾಕಿಸ್ತಾನಕ್ಕೆ ದಿಟ್ಟ ಪ್ರತ್ಯುತ್ತರ ನೀಡಬೇಕು. ಈಗಾಗಲೇ ನಾವು ಸಾಕಷ್ಟು ನೋವು ಅನುಭವಿಸಿದ್ದೇವೆ ಎಂದಿದ್ದಾರೆ.

Last Updated : Oct 20, 2019, 6:21 PM IST

ABOUT THE AUTHOR

...view details