ಇಸ್ಲಾಮಾಬಾದ್: ಗಿಲ್ಗಿಟ್-ಬಾಲ್ಟಿಸ್ತಾನದ ಸ್ಥಾನಮಾನವನ್ನು ಪೂರ್ಣ ಪ್ರಮಾಣದ ಪ್ರಾಂತ್ಯಕ್ಕೆ ಏರಿಸಲು ಪಾಕಿಸ್ತಾನ ನಿರ್ಧರಿಸಿದೆ ಎಂದು ಹಿರಿಯ ಸಚಿವರನ್ನು ಉಲ್ಲೇಖಿಸಿ ಮಾಧ್ಯಮ ವರದಿ ಮಾಡಿದೆ.
ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ಪ್ರದೇಶಗಳು ಸೇರಿದಂತೆ ಜಮ್ಮು ಕಾಶ್ಮೀರ ಮತ್ತು ಲಡಾಖ್ನ ಸಂಪೂರ್ಣ ಕೇಂದ್ರಾಡಳಿತ ಪ್ರದೇಶಗಳು ದೇಶದ ಅವಿಭಾಜ್ಯ ಅಂಗವಾಗಿದೆ ಎಂದು ಭಾರತ ಸ್ಪಷ್ಟವಾಗಿ ಪಾಕಿಸ್ತಾನಕ್ಕೆ ತಿಳಿಸಿದೆ. ಪಾಕಿಸ್ತಾನ ಸರ್ಕಾರ ಅಥವಾ ಅದರ ನ್ಯಾಯಾಂಗವು ಕಾನೂನು ಬಾಹಿರವಾಗಿ ಮತ್ತು ಬಲವಂತವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳ ಮೇಲೆ ಯಾವುದೇ ಅಧಿಕಾರವನ್ನು ಹೊಂದಿಲ್ಲ ಎಂದು ಭಾರತ ಹೇಳಿದೆ. ಪಾಕಿಸ್ತಾನದ ಇಂತಹ ಕ್ರಮಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿರುವ ಭಾರತ, ಪಾಕ್ ಆಕ್ರಮಿತ ಜಮ್ಮು ಕಾಶ್ಮೀರದ ಭಾರತದ ಭೂಪ್ರದೇಶಗಳಲ್ಲಿ ಬದಲಾವಣೆಗಳನ್ನು ತರಲು ಪ್ರಯತ್ನಗಳನ್ನು ಮಾಡುತ್ತಿದೆ.
ಆಕ್ರಮಿತ ಭೂ ಪ್ರದೇಶಗಳಲ್ಲಿ ಬದಲಾವಣೆಗಳನ್ನು ತರಲು ಯತ್ನಿಸುತ್ತಿರುವ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿರುವ ಭಾರತದ ವಿದೇಶಾಂಗ ಸಚಿವಾಲಯ, ಪಾಕಿಸ್ತಾನ ಆಕ್ರಮಿತ ಭಾರತದ ಭೂ ಪ್ರದೇಶಗಳನ್ನು ತಕ್ಷಣ ಖಾಲಿ ಮಾಡಬೇಕು ಎಂದು ಕಳೆದ ಮೇ ತಿಂಗಳಲ್ಲಿ ಸೂಚನೆ ನೀಡಿದೆ.
ಎಕ್ಸ್‌ಪ್ರೆಸ್ ಟ್ರಿಬ್ಯೂನ್‌ನ ವರದಿ ಪ್ರಕಾರ, ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ವ್ಯವಹಾರಗಳ ಸಚಿವ ಅಲಿ ಅಮೀನ್ ಗಂದಾಪುರ ಅವರು ಬುಧವಾರ ಪ್ರಧಾನಿ ಇಮ್ರಾನ್ ಖಾನ್ ಈ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನವನ್ನು ಎಲ್ಲಾ ಸಾಂವಿಧಾನಿಕ ಹಕ್ಕುಗಳನ್ನು ಹೊಂದಿರುವ ಪೂರ್ಣ ಪ್ರಮಾಣದ ಪ್ರಾಂತ್ಯವಾಗಿ ಘೋಷಣೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಅಸೆಂಬ್ಲಿ ಮತ್ತು ಸೆನೆಟ್ ಸೇರಿದಂತೆ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳಲ್ಲಿ ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಸಮರ್ಪಕ ಪ್ರಾತಿನಿಧ್ಯ ನೀಡಲಾಗುವುದು ಎಂದು ಗಂಡಾಪುರ ಹೇಳಿದ್ದಾರೆ.