ನವದೆಹಲಿ:ಮೂರು ದಿನಗಳ ಕಾಲ ವಿದೇಶ ಪ್ರಯಾಣ ಕೈಗೊಳ್ಳಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪಾಕಿಸ್ತಾನದ ವಾಯು ಮಾರ್ಗದ ಮೂಲಕ ತೆರಳಬೇಕಿತ್ತು. ಆದರೆ ಪಾಕ್ ತನ್ನ ವಾಯು ಮಾರ್ಗವನ್ನ ಬಳಕೆಗೆ ಅನುಮತಿ ನೀಡಲು ನಿರಾಕರಿಸಿದೆ.
ಸೋಮವಾರದಿಂದ ರಾಷ್ಟ್ರಪತಿ ರಮನಾಥ್ ಕೋವಿಂದ್ ಅವರು ಐಸ್ಲ್ಯಾಂಡ್, ಸ್ವಿಡ್ಜರ್ಲ್ಯಾಂಡ್ ಮತ್ತು ಸ್ಲೊವೆನಿಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಹೀಗಾಗಿ ನವದೆಹಲಿಯಿಂದ ಪಾಕಿಸ್ತಾನದ ವಾಯು ಮಾರ್ಗದ ಮೂಲಕ ವಿಮಾನ ಹಾದು ಹೋಗಲಿದ್ದು, ಪಾಕಿಸ್ತಾನದ ಅನುಮತಿ ಕೇಳಲಾಗಿತ್ತು.
ಆದ್ರೆ ರಾಷ್ಟ್ರಪತಿಗಳ ವಿಮಾನ ಹಾರಾಟಕ್ಕೆ ಅನುಮತಿ ನೀಡಲು ಪಾಕ್ ನಿರಾಕರಿಸಿದೆ. ಈ ಬಗ್ಗೆ ಮಾತನಾಡಿರುವ ಪಾಕ್ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ, ರಾಮನಾಥ್ ಕೋವಿಂದ್ ಅವರ ವಿಮಾನ ಪಾಕ್ ವಾಯು ಮಾರ್ಗ ಬಳಸುವುದಕ್ಕೆ ಅನುಮತಿ ನೀಡಲು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನಿರಾಕರಿಸಿದ್ದಾರೆ ಎಂದಿದ್ದಾರೆ.
ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನ ರದ್ದುಗೊಳಿಸಿದ ನಂತರ ಪಾಕಿಸ್ತಾನ ಮತ್ತು ಭಾರತದ ನಡುವೆ ರಾಜತಾಂತ್ರಿಕ ಸಂಬಂಧ ಹಳಸಿದೆ. ಹೀಗಾಗಿಯೇ ಪಾಕ್ ವಾಯು ಮಾರ್ಗ ಬಳಸಲು ಅನುಮತಿ ನೀಡಿಲ್ಲ ಎಂದು ಹೇಳಲಾಗುತ್ತಿದೆ.
ಪುಲ್ವಾಮ ದಾಳಿಯ ನಂತರ ಪಾಕಿಸ್ತಾನ ತನ್ನ ವಾಯು ಮಾರ್ಗದ ಮೇಲೆ ನಿರ್ಬಂಧ ಹೇರಿತ್ತು. ಕೆಲವು ತಿಂಗಳ ನಂತರ ನಿರ್ಬಂಧ ಹಿಂಪಡೆದಿದ್ದ ಪಾಕ್, ಮತ್ತೆ ನಿರ್ಬಂಧ ಹೇರಿ ಆದೇಶ ಹೊರಡಿಸಿತ್ತು.