ನವದೆಹಲಿ:ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಚೀನಾದ ಸಹಾಯದಿಂದ ಪಾಕಿಸ್ತಾನವು ಭೂಮಿಯ ಮೇಲ್ಮೈಯಿಂದ ಆಕಾಶಕ್ಕೆ ಹಾರಿಸಬಲ್ಲ ಕ್ಷಿಪಣಿಗಳ ತಾಣಗಳನ್ನು ಸ್ಥಾಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಹೆಚ್ಚುವರಿ ಮಿಲಿಟರಿ ಮೂಲ ಸೌಕರ್ಯಗಳನ್ನು ಸ್ಥಾಪಿಸಲು ಚೀನಾ ಮತ್ತು ಪಾಕಿಸ್ತಾನ ಸೇನೆಗಳು ವಿವಾದಿತ ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಪ್ರದೇಶಗಳನ್ನು ಮರುಪರಿಶೀಲಿಸುತ್ತಿವೆ ಎನ್ನಲಾಗಿದೆ.
ಭಾರತೀಯ ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ಆರ್.ಕೆ.ಎಸ್.ಭದೌರಿಯಾ ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ಮತ್ತು ಚೀನಾ ತಮ್ಮ ದ್ವಿಪಕ್ಷೀಯ ಕಾರ್ಯಾಚರಣೆಯನ್ನು ಹೆಚ್ಚಿಸಿವೆ ಎಂದು ಹೇಳಿದ್ದರು.
ಪಿಒಕೆಯ ಲಸದನ್ನ ಧೋಕ್ ಬಳಿಯ ಪೌಲಿ ಪಿರ್‌ನಲ್ಲಿ ಚೀನಾ ಮತ್ತು ಪಾಕಿಸ್ತಾನ ಸೇನೆ, ಭೂಮಿಯ ಮೇಲ್ಮೈಯಿಂದ ಆಕಾಶಕ್ಕೆ ಹಾರಿಸಬಲ್ಲ ಕ್ಷಿಪಣಿಗಳ ತಾಣಗಳ ನಿರ್ಮಾಣ ಮಾಡುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಪಾಕಿಸ್ತಾನದ ಸುಮಾರು 120 ಸೇನಾ ಸಿಬ್ಬಂದಿ ಮತ್ತು 25ರಿಂದ 40 ನಾಗರಿಕರು ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವ್ಯವಸ್ಥೆಯ ನಿಯಂತ್ರಣ ಕೊಠಡಿ ಪಿಒಕೆ ಕೇಂದ್ರ ಕಚೇರಿಯಲ್ಲಿರುತ್ತದೆ. ಮೂವರು ಅಧಿಕಾರಿಗಳು ಸೇರಿದಂತೆ ಹತ್ತು ಮಂದಿ ಚೀನಾ ಸೈನಿಕರನ್ನು ನಿಯಂತ್ರಣ ಕೊಠಡಿಯಲ್ಲಿ ನಿಯೋಜಿಸಲಾಗಿದೆ' ಎಂದು ಮೂಲಗಳು ತಿಳಿಸಿವೆ.
ಪಿಒಕೆಯ ಹಟ್ಟಿಯನ್ ಬಾಲಾ ಜಿಲ್ಲೆಯ ಚಿನಾರ್ ಗ್ರಾಮ ಮತ್ತು ಚಕೋಟಿ ಗ್ರಾಮದಲ್ಲೂ ಇದೇ ರೀತಿಯ ನಿರ್ಮಾಣಗಳು ವರದಿಯಾಗಿವೆ ಎಂದು ಮೂಲಗಳು ತಿಳಿಸಿವೆ. ಚೀನಾದ ಜಗ್ಲೋಟ್‌ನಿಂದ ಗೌರಿ ಕೋಟ್‌ವರೆಗೆ ಎಂಜಿನಿಯರ್‌ಗಳು ರಸ್ತೆ ನಿರ್ಮಿಸುತ್ತಿದ್ದು, ಗುಲ್ತಾರಿ ತನಕ ವಿಸ್ತರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.