ನವದೆಹಲಿ: ಭಾರತದ ವಾಯುಪಡೆ ಮಿಗ್ 21 ಮೂಲಕ ಪಾಕಿಸ್ತಾನದ ವಾಯುಪಡೆಯ ಎಫ್ 16 ಯುದ್ಧವಿಮಾನವನ್ನು ಹೊಡೆದುಹಾಕಿದೆ ಎಂಬುದನ್ನು ಪಾಕ್ ತಿರಸ್ಕರಿಸುತ್ತಲೇ ಬಂದಿದೆ. ತಮ್ಮ ವಾದಕ್ಕೆ ಇದೇ ಪುರಾವೆ ಎಂದು ಕೆಲವು ಫೋಟೋಗಳನ್ನು ಸಹ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದೆ.
ಭಾರತದ ಮಿಗ್ 21 ಎಸೆದ ಕ್ಷಿಪಣಿ ಯಾವುದೇ ಅನಾಹುತ ಮಾಡದೆ ಸ್ಪೋಟಗೊಂಡಿವೆ ಎಂದು ಹೇಳಿರುವ ಪಾಕ್, ಮಿಸೈಲ್ ಸಿಡಿತಲೆಯ ಭಗ್ನಾವಶೇಷಗಳನ್ನು ಪೋಸ್ಟ್ ಮಾಡಿದೆ. ಆದರೆ ಪಾಕ್ನ ಈ ವಾದವನ್ನು ಭಾರತ ಸಾರಾಸಗಟಾಗಿ ಅಲ್ಲಗಳೆದಿದೆ.
ಪಾಕಿಸ್ತಾನದ ವಾಯುಪಡೆಯ ಇಂಟರ್ ಸರ್ವೀಸ್ ಪಬ್ಲಿಕ್ ರಿಲೇಶನ್ಸ್ನ ಮಹಾನಿರ್ದೇಶಕ ಮೇಜರ್ ಜನರಲ್ ಆಸಿಫ್ ಘಪೂರ್ ಟ್ವೀಟ್ ಮಾಡಿ, ಪಾಕ್ನಲ್ಲಿ ಪತನವಾದ ಮಿಗ್ 21ನಲ್ಲಿದ್ದ ಮಿಸೈಲ್ನ ನಾಲ್ಕು ಸಿಡಿತಲೆ ಅವಶೇಷಗಳನ್ನು ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ.
ಪಾಕ್ ವಾಯುಪಡೆ ಹೊಡೆದುರುಳಿಸುವ ಮುನ್ನ ಮಿಗ್ 21 ಇಲ್ಲಿನ ಎಫ್16 ಅನ್ನು ಹೊಡೆದುರುಳಿಸಿತು ಎಂದು ಭಾರತ ಹೇಳುತ್ತಿದೆ. ಆದರೆ ಎಲ್ಲಿಗೂ ತಾಗದ 4 ಮಿಸೈಲ್ ಸಿಡಿತಲೆಗಳ ಅವಶೇಷಗಳು ಪತ್ತೆಯಾಗಿವೆ. ಪಾಕಿಸ್ತಾನ ಹಾಗೂ ಸೇನಾ ಸಿಬ್ಬಂದಿ ಪ್ರಮಾಣಿಕವಾಗಿಯೇ ಇದೆ. ಈ ಮೂಲಕ ಹೆಚ್ಚಿನ ಸತ್ಯಾಂಶವನ್ನು ನಾವು ಹಂಚಿಕೊಳ್ಳುತ್ತಿದ್ದೇವೆ ಎಂದು ಘಫೋರ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.
ಇದಕ್ಕ ಪ್ರತಿಕ್ರಿಯೆ ನೀಡಿರುವ ಭಾರತೀಯ ವಾಯುಪಡೆ, ಯುದ್ಧವಿಮಾನದ ಕಾರ್ಯಾಚರಣೆಯಲ್ಲಿ ಸಿಡಿತಲೆಗಳು ನೆಲಕ್ಕುರುಳುವುದು ಸಹಜ ಎಂದಿದೆ. ಅಲ್ಲದೆ, ಪಾಕಿಸ್ತನದ ಒಂದೂ ಎಫ್ 16 ಯುದ್ಧವಿಮಾನ ಕಾಣೆಯಾಗಿಲ್ಲ ಎಂಬ ಅಮೆರಿಕದ ಮ್ಯಾಗಜೀನ್ ವರದಿಯನ್ನೂ ತಳ್ಳಿಹಾಕಿದೆ. ಎಫ್ 16 ಅನ್ನು ಹೊಡೆದುರುಳಿಸಲಾಗಿದೆ ಎಂಬುದಕ್ಕೆ ಭಾರತ ಈಗಾಗಲೆ ಎಲೆಕ್ಟ್ರಾನಿಕ್ ಗುರುತುಗಳ್ನನೂ ತೋರಿಸಿದೆ ಎಂದು ಸಮರ್ಥಿಸಿಕೊಂಡಿದೆ. ಪಾಕ್ ಆಕ್ರಮಿತ ಕಾಶ್ಮೀರದ ನೌಶೇರಾ ಭಾಗದಲ್ಲಿಯೇ ಎಫ್16 ಅನ್ನು ಹೊಡೆದುರುಳಿಸಲಾಗಿದೆ ಎಂದೂ ಹೇಳಿದೆ.