ನವದೆಹಲಿ:ಸಿಬಿಐ ಬಂಧನದಲ್ಲಿದ್ದ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಸದ್ಯ ಜಾರಿ ನಿರ್ದೇಶನಾಲಯದ ಬಂಧನಕ್ಕೊಳಗಾಗಿದ್ದಾರೆ. ಈ ಮೂಲಕ ಹಿರಿಯ 'ಕೈ' ನಾಯಕ ಕೊನೆಗೂ ಇಡಿ ಬಿಗಿಹಿಡಿತಕ್ಕೆ ಸಿಲುಕಿದ್ದಾರೆ.
ಬುಧವಾರ ಮುಂಜಾನೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಹಾರ್ ಜೈಲಿಗೆ ಆಗಮಿಸಿ ಪ್ರಾಥಮಿಕ ವಿಚಾರಣೆ ನಡೆಸಿದ ಬಳಿಕ ಚಿದು ಅವರನ್ನು ಬಂಧಿಸಿದ್ದಾರೆ. ಇದಕ್ಕೂ ಮುನ್ನ ಎರಡು ಗಂಟೆಗಳ ಕಾಲ ಅಧಿಕಾರಿಗಳು ಸುದೀರ್ಘ ವಿಚಾರಣೆ ನಡೆಸಿದ್ದಾರೆ.
ಮಂಗಳವಾರ ಚಿದಂಬರಂ ಬಂಧನಕ್ಕೆ ಇಡಿ ಪರ ವಕೀಲ ತುಷಾರ್ ಮೆಹ್ತಾ ಕೋರ್ಟ್ನಲ್ಲಿ ಮನವಿ ಮಾಡಿದ್ದರು. ಇಡಿ ಮನವಿಯನ್ನು ಪುರಸ್ಕರಿಸಿದ್ದ ಸಿಬಿಐ ಜಡ್ಜ್ ಅಜಯ್ ಕುಮಾರ್ ಕುಹರ್,ಚಿದಂಬರಂ ವಿಚಾರಣೆ ಹಾಗೂ ಬಂಧನಕ್ಕೆ ಅನುಮತಿ ನೀಡಿದ್ದರು.
ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ತಿಹಾರ್ ಜೈಲು ಸೇರಿರುವ ಚಿದಂಬರಂ ನ್ಯಾಯಾಂಗ ಬಂಧನ ಅ.17ಕ್ಕೆ ಮುಕ್ತಾಯವಾಗಲಿದೆ. ಆಗಸ್ಟ್ 21ರ ರಾತ್ರಿ ಸಿಬಿಐ ಬಂಧನಕ್ಕೊಳಗಾಗಿರುವ ಚಿದಂಬರಂ ಈಗಾಗಲೇ ಸಿಬಿಐ ಕಸ್ಟಡಿಯಲ್ಲಿ 55 ದಿನ ಕಳೆದಿದ್ದಾರೆ.