ಹೈದರಾಬಾದ್ (ತೆಲಂಗಾಣ):ಚೀನಾದ ಗಡಿ ಬಿಕ್ಕಟ್ಟು, ಲಡಾಖ್ ಘರ್ಷಣೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ನಿನ್ನೆ ಸರ್ವಪಕ್ಷ ಸಭೆ ಕರೆದಿದ್ದರು. ಈ ಸಭೆಗೆ ಎಐಎಂಐಎಂ ಸದಸ್ಯರನ್ನು ಆಹ್ವಾನಿಸದ ಕಾರಣ ಓವೈಸಿ ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಭಾರತ ಮತ್ತು ಚೀನಾ ಸೈನ್ಯದ ನಡುವಿನ ಸಂಘರ್ಷದಲ್ಲಿ ದೇಶದ 20 ಸೈನಿಕರು ಹುತಾತ್ಮರಾಗಿದ್ದಾರೆ. ಈ ಬಿಕ್ಕಟ್ಟನ್ನು ರಾಜಕೀಯ ಉದ್ದೇಶದಿಂದ ನೋಡಬೇಡಿ, ಉತ್ತಮ ಕಾರ್ಯತಂತ್ರವನ್ನು ರೂಪಿಸುವಲ್ಲಿ ನೀವು ವಿಫಲರಾಗಿದ್ದೀರಿ ಎಂದು ಅವರು ದೂರಿದ್ದಾರೆ.
ಭಾರತಕ್ಕೆ ಸೇಡು ತೀರಿಸಿಕೊಳ್ಳಲು ಉತ್ತಮ ಮಾರ್ಗವೆಂದರೆ, ಚೀನಾ ಆಕ್ರಮಿತ ಗಾಲ್ವಾನ್ ಕಣಿವೆ ಮತ್ತು ಪ್ಯಾಂಗೊಂಗ್ ಸೋ ಸರೋವರ ಪ್ರದೇಶಗಳನ್ನು ವಶಪಡಿಸಿಕೊಳ್ಳುವುದು. ಆ ಮೂಲಕ ಹುತಾತ್ಮರಾದ ನಮ್ಮ ಸೈನಿಕರಿಗೆ ನಾವು ಗೌರವ ಸಲ್ಲಿಸಬೇಕು. ಜೊತೆಗೆ ಈ ಹಿಂದೆ ನಡೆದ ಘಟನೆಗಳು, ಚೀನಾ ಆಕ್ರಮಿತ ಪ್ರದೇಶದ ವ್ಯಾಪ್ತಿ, ಭಾರತ ತೆಗೆದುಕೊಂಡ ನಿರ್ಧಾರ, ಗಡಿ ಒಪ್ಪಂದ ಕುರಿತು ಅನುಕ್ರಮವಾಗಿ ಪರಿಶೀಲಿಸಲು ಸ್ವತಂತ್ರ ಪರಿಶೀಲನಾ ಸಮಿತಿಯನ್ನು ರಚಿಸುವಂತೆ ಅವರು ಕೋರಿದ್ದಾರೆ.
ರಾಷ್ಟ್ರೀಯ ಒಮ್ಮತ ಮತ್ತು ಏಕೀಕೃತ ಪ್ರತಿಕ್ರಿಯೆ ಅತ್ಯಗತ್ಯವಾಗಿರುವ ಈ ಸಮಯದಲ್ಲಿ, ಎಐಎಂಐಎಂ ಅನ್ನು ಸಭೆಗೆ ಆಹ್ವಾನಿಸದಿರುವುದು ದುರದೃಷ್ಟಕರ. ಎಐಎಂಐಎಂ ಒಂದು ಸಣ್ಣ ರಾಜಕೀಯ ಪಕ್ಷವಾಗಿರಬಹುದು, ಆದರೆ ಅದರ ಅಧ್ಯಕ್ಷರಾಗಿ ಕಳೆದ ಕೆಲ ವಾರಗಳಿಂದ ಚೀನಾ ಆಕ್ರಮಿತ ಭೂಪ್ರದೇಶದ ಕುರಿತು ವಿಷಯ ಪ್ರಸ್ತಾಪ ಮಾಡುತ್ತಿದ್ದೇನೆ. ಎಲ್ಲಾ ರಾಜಕೀಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಓವೈಸಿ ಮನವಿ ಮಾಡಿದ್ದಾರೆ.