ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಸರ್ಕಾರ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದಿದೆ. ಆದರೆ ಚುನಾವಣಾ ಆಯೋಗದ ಪ್ರಕಾರ ಸುಮಾರು 7 ಲಕ್ಷಕ್ಕೂ ಹೆಚ್ಚು ಮಂದಿ ಯಾವುದೇ ಪಕ್ಷಕ್ಕೂ ಮತ ಚಲಾಯಿಸದೇ ನೋಟಾ ಆಯ್ಕೆ ಮಾಡಿಕೊಂಡಿದ್ದಾರೆ.
ಹೌದು, ಚುನಾವಣಾ ಆಯೋಗ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ 7,06,252 ಮಂದಿ ಅಥವಾ ಶೇಕಡಾ 1.7ರಷ್ಟು ಮತದಾರರು ಯಾವುದೇ ಅಭ್ಯರ್ಥಿಗೆ ಮತ ಚಲಾಯಿಸದೇ ನೋಟಾ ಆಯ್ಕೆ ಮಾಡಿಕೊಂಡು ಯಾವುದೇ ಪಕ್ಷದ ಉಸಾಬರಿಯೂ ಬೇಡ ಎಂಬ ನಿಲುವು ತಳೆದಿದ್ದಾರೆ.
ಬಿಹಾರದಲ್ಲಿ ಮೂರು ಹಂತದ ಚುನಾವಣೆಗಳು ನಡೆದಿದ್ದು, 7.3ಕೋಟಿ ಮತದಾರರಲ್ಲಿ 4 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಅಂದರೆ ಅಲ್ಲಿ ಮತದಾನ ಮಾಡಿದವರು ಶೇಕಡಾ 57.09 ಮಂದಿ ಮಾತ್ರ. ಇಷ್ಟು ಮತದಾರರಲ್ಲಿ 7 ಲಕ್ಷಕ್ಕೂ ಹೆಚ್ಚು ಮಂದಿ ನೋಟಾಗೆ ತಮ್ಮ 'ಮತ' ಚಲಾಯಿಸಿದ್ದಾರೆ.
ಸದ್ಯಕ್ಕೆ ಆಡಳಿತರೂಢ ಎನ್ಡಿಎ ಮೈತ್ರಿಕೂಟ 243 ಕ್ಷೇತ್ರಗಳಲ್ಲಿ 125 ಸ್ಥಾನಗಳನ್ನು ಪಡೆದುಕೊಂಡಿದೆ. ಪ್ರತಿಪಕ್ಷದ ಸ್ಥಾನದಲ್ಲಿದ್ದ ಮಹಾಘಟಬಂಧನ್ ಮೈತ್ರಿಕೂಟವು 110 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ. ನಿತೀಶ್ ಕುಮಾರ್ ನಾಲ್ಕನೇ ಬಾರಿ ಸಿಎಂ ಆಗಲು ದಾರಿಗಳು ಸ್ಪಷ್ಟವಾಗಿವೆ.