ವಿಶಾಖಪಟ್ಟಣಂ (ಆಂಧ್ರಪ್ರದೇಶ) :ವಿಶಾಖಪಟ್ಟಣಂ ಬಳಿಯ ಎಲ್ ಜಿ ಪಾಲಿಮರ್ಸ್‌ನ ಟ್ಯಾಂಕ್‌ನಿಂದ ಗುರುವಾರ ಸೋರಿಕೆಯಾದ ಶೇ.60ರಷ್ಟು ಸ್ಟೈರೀನ್ ವಿಷಾನಿಲ ಕನಿಷ್ಠ 11 ಜನರನ್ನು ಬಲಿ ತೆಗೆದುಕೊಂಡಿತ್ತು. ಇದೀಗ ಸ್ಥಾವರದಲ್ಲಿನ ಎಲ್ಲಾ ರಾಸಾಯನಿಕ ಟ್ಯಾಂಕ್‌ಗಳು ಸುರಕ್ಷಿತವಾಗಿವೆ ಎಂದು ಜಿಲ್ಲಾಧಿಕಾರಿ ವಿ ವಿನಯ್ ಚಂದ್ ಮಾಹಿತಿ ನೀಡಿದ್ದಾರೆ.
ಆಂಧ್ರಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ನಲ್ಲಿ ವರದಿ ನೀಡಿದ ಜಿಲ್ಲಾಧಿಕಾರಿ, ಮುಂದಿನ 18ರಿಂದ 24 ಗಂಟೆಯಲ್ಲಿ ಸಂಪೂರ್ಣವಾಗಿ ಆ ಪ್ರದೇಶ ಸುರಕ್ಷಿತವಾಗಲಿದೆ ಎಂದಿದ್ದಾರೆ. ಅಲ್ಲದೆ ಪರಿಸ್ಥಿತಿ ಈಗ ಸಂಪೂರ್ಣ ಹತೋಟಿಗೆ ಬಂದಿದೆ ಹಾಗೂ ಸೋರಿಕೆಯನ್ನು ನಿವಾರಿಸಲು ನಾವು ಎಲ್ಲಾ ರೀತಿಯ ಕ್ರಮಗಳನ್ನೂ ತೆಗೆದುಕೊಂಡಿದ್ದೇವೆ. ತಜ್ಞರು ಸೂಕ್ಷ್ಮವಾಗಿ ಗಮನವಿಟ್ಟಿದ್ದಾರೆ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿದ ವಿಶಾಖಪಟ್ಟಣಂನ ಪರಿಹಾರ ಮೇಲ್ವಿಚಾರಣೆ ಮಾಡುತ್ತಿದ್ದ ಮುಖ್ಯ ಕಾರ್ಯದರ್ಶಿ ನಿಲಾಮ್ ಸಾನ್ಹಿ, ಎಲ್ಜಿ ಸ್ಥಾವರದಲ್ಲಿನ ಎಲ್ಲಾ ಟ್ಯಾಂಕ್‌ಗಳು ಸುರಕ್ಷಿತವಾಗಿದೆ. ಪರಿಸ್ಥಿತಿ ಸಹ ನಿಯಂತ್ರಣದಲ್ಲಿದೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಜಗನ್, ಅಲ್ಲಿನ ಇಂಜಿನಿಯರ್ಗಳೊಂದಿಗೆ ಮಾತನಾಡಲು ಹಾಗೂ ಅಲ್ಲಿನ ರಾಸಾಯನಿಕಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಕ್ರಮವನ್ನು ಅನ್ವೇಷಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಈ ನಡುವೆ ರಾಸಾಯನಿಕವನ್ನು ಈ ಪ್ಲಾಂಟ್ನಿಂದ ಬೇರೆಡೆ ಸಾಗಿಸಲು ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಈ ಕುರಿತು ನಿಲಾಮ್ ಮಾತನಾಡಿ, ರಾಸಾಯನಿಕ ಸೋರಿಕೆಯ ಉನ್ನತ ಮಟ್ಟದ ತನಿಖೆಗೆ ಸಮಿತಿ ರಚಿಸಲು ಆದೇಶ ನೀಡಿದರು. ಅಲ್ಲದೆ ಉನ್ನತ ಮಟ್ಟದ ಸಮಿತಿಯು ರಾಸಾಯನಿಕ ಸೋರಿಕೆಗೆ ನಿಖರ ಕಾರಣ ಹಾಗೂ ಕಂಪನಿಯು ಎಲ್ಲಾ ನಿಯಮಗಳನ್ನು ಸರಿಯಾಗಿ ಪಾಲಿಸಿದಿಯೇ ಎಂಬುದನ್ನು ತನಿಖೆ ನಡೆಸಲಿದೆ. ಇದಲ್ಲದೆ ವಿಷಾನಿಲ ಸೋರಿಕೆಯಿಂದ ಸುತ್ತಮುತ್ತಲಿನ ಹಳ್ಳಿಗಳಿಗೆ ದೀರ್ಘಕಾಲಿನ ಪರಿಣಾಮಗಳು ಉಂಟಾಗಲಿದಿಯೇ ಎಂಬುದನ್ನು ಅಧ್ಯಯನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.