ನವದೆಹಲಿ: ದೇಶದಲ್ಲಿನ ಶೇ. 60 ರಷ್ಟು ಕೋವಿಡ್ ಸಕ್ರಿಯ ಪ್ರಕರಣಗಳು ಕೇವಲ ಐದು ರಾಜ್ಯಗಳಲ್ಲಿ ಕೇಂದ್ರೀಕೃತವಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 5 ಸಾವಿರಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳಿವೆ. ಆದರೆ ಶೇ. 60ರಷ್ಟು ಕೊರೊನಾ ಆ್ಯಕ್ಟಿವ್ ಕೇಸ್ಗಳು ಕೇವಲ ಐದು ರಾಜ್ಯಗಳಲ್ಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಟ್ವೀಟ್ ಮಾಡಿದೆ.
ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 52 ಲಕ್ಷ ಗಡಿ ದಾಟಿದ್ದು, 10,17,754 ಕೇಸ್ಗಳು ಸಕ್ರಿಯವಾಗಿವೆ. ಕೋವಿಡ್ ಪೀಡಿತ ಭಾರತದ ಟಾಪ್ 5 ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ, ಉತ್ತರ ಪ್ರದೇಶ ಹಾಗೂ ದೆಹಲಿಯಲ್ಲೇ ಅತಿ ಹೆಚ್ಚು ಆ್ಯಕ್ಟಿವ್ ಕೇಸ್ಗಳಿವೆ.
ಮಹಾರಾಷ್ಟ್ರದಲ್ಲಿ 3,02,135, ಕರ್ನಾಟಕದಲ್ಲಿ 1,03,650, ಆಂಧ್ರಪ್ರದೇಶದಲ್ಲಿ 88,197, ಉತ್ತರ ಪ್ರದೇಶದಲ್ಲಿ 68,235 ಹಾಗೂ ದೆಹಲಿಯಲ್ಲಿ 31,721 ಕೋವಿಡ್ ಪ್ರಕರಣಗಳು ಸಕ್ರಿಯವಾಗಿವೆ.
ಮುಂದಿನ ವರ್ಷ ಭಾರತದಲ್ಲೇ ಕೋವಿಡ್-19 ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದ್ದರು.